Advertisement

ಟೋಲ್‌ನಲ್ಲಿ  ಕಾಯಿರಿ; ಹೆದ್ದಾರಿಯಲ್ಲಿ  ದಣಿಯಿರಿ

09:00 AM Sep 01, 2017 | Team Udayavani |

ಪಡುಬಿದ್ರಿ: “ಟೋಲ್‌ನಲ್ಲಿ ಕಾಯಿರಿ ಹಾಗೂ ಹೆದ್ದಾರಿ ಸಂಚಾರದಲ್ಲಿ ದಣಿಯಿರಿ’ ಇದು ನವಯುಗ ನಿರ್ಮಾಣ ಕಂಪೆನಿ ಕಾರ್ಯವೈಖರಿ. ಗುರುವಾರದಂದು ಸಂಜೆಯ ವೇಳೆ ವಸ್ತುಶಃ ಪಡುಬಿದ್ರಿ ಸಮೀಪದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಾಹನಗಳ ಸಾಲು ಸಾಲೇ ಕಂಡು ಬಂತು. ಮೂರು ನಿಮಿಷಗಳಿಗೂ ಹೆಚ್ಚು ಕಾಲ ಟೋಲ್‌ಗೇಟ್‌ ಸರತಿ ಸಾಲಲ್ಲಿ ನಿಂತ ಬಳಿಕ ಟೋಲ್‌ ಪಾವತಿಸಬೇಕಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿದ್ದರೂ ಇಲ್ಲಿ 10-15 ನಿಮಿಷ ನಿಂತರೂ ಸುಂಕ ಕಟ್ಟದೆ ಗೇಟ್‌ ತೆರೆಯುವುದಿಲ್ಲ.

Advertisement

ನವಯುಗ ಟೋಲ್‌ನಲ್ಲಿನ ಮೂರು ಮೆಶಿನ್‌ಗಳು ಕೈಕೊಟ್ಟಿದ್ದಾಗಿ ಮೂಲಗಳು ತಿಳಿಸಿವೆ. ಕೆಲವೊಂದು ವೇಳೆ ಸಿಸ್ಟಮ್‌ಗಳೇ “ಸ್ಲೋ’ ಆಗಿ ಬಿಡುತ್ತಿವೆ. ಇಲ್ಲಿರುವ ಐದು ಗೇಟುಗಳ ಪೈಕಿ ಕೇವಲ 2 ಗೇಟ್‌ಗಳಲ್ಲೇ  ಸುಂಕ ಸಂಗ್ರಹ ಮಾಡುವುದರಿಂದ ಮತ್ತು ಇದು ಸರ್ವೇಸಾಮಾನ್ಯವಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದರಿಂದ ವಾಹನ
ಗಳ ಸರತಿಯ ಸಾಲು ಕಂಡುಬರುತ್ತಿವೆ. 

ಕಾರ್ಮಿಕರ ಸಂಬಳದಿಂದ “ಸುಂಕ ಕಟ್‌’
ಸಾಲು ಉಂಟಾದ ಸಂದರ್ಭ ಹೊರ ಗುತ್ತಿಗೆ ಕಾರ್ಮಿಕರು ವಾಹನ ಚಾಲಕ ವರ್ಗದವರಿಂದ, ಮಾಲಕ ರಿಂದ ಕೀಳು ಭಾಷೆಯ ಬೈಗುಳ ಸರಮಾಲೆಯನ್ನೇ  ಕೇಳ ಬೇಕಾಗಿ ಬರುತ್ತಿದೆ. ಕೇವಲ 9,000 ರೂ. ಸಂಬಳಕ್ಕೆ ದುಡಿ ಯುತ್ತಿರುವ ಇವರು ಬಸ್‌, ಲಾರಿಗಳಂತಹ ಘನ ವಾಹನ ಗಳ ಚಾಲಕರು ಸರತಿ ಸಾಲಿನಲ್ಲಿ ಸಾಕಷ್ಟು ಕಾದು 3 ನಿಮಿಷ ಗಳ ಅವಧಿ ತೀರಿರುವುದಾಗಿ ಜಗಳವಾಡಿ ಒಂದೊಮ್ಮೆ ಸುಂಕ ಪಾವತಿಸದೆ ತೆರಳಿದರೆ ನವಯುಗ ಅಧಿಕಾರಿಗಳು ಸಿಸಿಟಿವಿ ಫೂಟೇಜ್‌ಗಳನ್ನು ಪರೀಕ್ಷಿಸಿ ಈ ಕಾರ್ಮಿಕರ ಸಂಬಳದಿಂದಲೇ “ಸುಂಕ ಕಟ್‌’ ಮಾಡುತ್ತಿದ್ದಾರೆ. 

ಬಹುತೇಕ ಎಲ್ಲ ತೆಲುಗು ಭಾಷಿಗರಾಗಿರುವ ನವಯುಗ ನಿರ್ಮಾಣ ಕಂಪೆನಿಯ ಅಧಿಕಾರಿಗಳು  ಟೋಲ್‌ ಕಟ್ಟಡದ ಮೇಲ್ಭಾಗದಲ್ಲೇ ಇದ್ದರೂ ಸಾರ್ವಜನಿಕರೆದುರು ಕಾಣಿಸಿ ಕೊಳ್ಳದೆ  ನುಣುಚಿಕೊಳ್ಳುತ್ತಿದ್ದಾರೆ. ಇಂಥವರಿಂದಾಗಿ 
ಟೋಲ್‌ಗೇಟ್‌ ಕಂಪ್ಯೂಟರ್‌ಗಳು ರಿಪೇರಿ ಭಾಗ್ಯವನ್ನೇ ಕಾಣು ತ್ತಿಲ್ಲ. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸ ಬೇಕಾಗಿ ಸರತಿ ಸಾಲಲ್ಲಿ ಸಿಲುಕಿ ಪರಿತಪಿಸಿದ ಪಡುಬಿದ್ರಿಯ ಸಂತೋಷ್‌ಕುಮಾರ್‌ ಶೆಟ್ಟಿ ಆಗ್ರಹಿಸಿದ್ದಾರೆ.

ವೇಗವರ್ಧನೆಗೊಳ್ಳದ ಕಾಮಗಾರಿ
ಮಂಗಳೂರಿನಿಂದ ಉಡುಪಿಯತ್ತ ಬರುವ ವಾಹನ ಗಳಂತೂ ಸುಂಕ ಪಾವತಿಸಿ ಇನ್ನೇನು ಟೋಲ್‌ ಪಾವತಿಸಿದ ರಸ್ತೆ ಇದೆ ಎಂದೆಣಿಸಿ ಧಾವಿಸಿ ಬಂದಲ್ಲಿ ಪಡುಬಿದ್ರಿಯಲ್ಲಿ ಮತ್ತೆ ಈ ವಾಹನಗಳ ವೇಗಕ್ಕೆ ಬ್ರೇಕ್‌ ಬೀಳುತ್ತಿದೆ. ಪಡುಬಿದ್ರಿ ಮುಖ್ಯ ಪೇಟೆಯಲ್ಲಿನ ಬಹುತೇಕ ಕಟ್ಟಡಗಳ ತೆರವು ಕಾರ್ಯಾಚರಣೆ ಮುಗಿದಿದ್ದರೂ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ದಿನನಿತ್ಯದ ವಾಹನ ದಟ್ಟಣೆ ಪಡುಬಿದ್ರಿಯ ಭಾಗದಲ್ಲಿ ಹಿಂದಿನಂತೆಯೇ ಮುಂದುವರಿದಿದೆ. ಇನ್ನು ಕೆಲವೆಡೆ ಹೆದ್ದಾರಿ ದುರಸ್ತಿ ಎಂದು ವಾರಗಟ್ಟಲೆ ಒಂದು ಬದಿಯ ರಸ್ತೆಯನ್ನು ಬಂದ್‌ ಮಾಡುತ್ತಿರುವುದು ಅಪಘಾತಗಳಿಗೂ ಕಾರಣವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next