ಹೊಸದಿಲ್ಲಿ: ಕೋವಿಡ್, ಲಾಕ್‌ಡೌನ್‌ನಿಂದ ತತ್ತರಿಸಿದ್ದ ಭಾರತೀಯ ಉದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಸುದ್ದಿ ಇದು. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿ ರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಶೇ. 87ರಷ್ಟು ಸಂಸ್ಥೆಗಳು ವೇತನ ಹೆಚ್ಚಳ ಮಾಡಲು ಉದ್ದೇಶಿಸಿವೆ.
2021ರಲ್ಲಿ ಸರಾಸರಿ ಶೇ. 7.3ರಷ್ಟು ಸಂಬಳವನ್ನು ಹೆಚ್ಚಿಸಲು ವಿವಿಧ ವಲಯಗಳ ಕಂಪೆನಿಗಳು ಚಿಂತನೆ ನಡೆಸಿವೆ ಎಂದು ಆನ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಏರಿಕೆ ಪ್ರಸಕ್ತ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ.
ವೇತನ ಹೆಚ್ಚಳ ಮಾಡುವ ಇರಾದೆ ವ್ಯಕ್ತ ಪಡಿಸಿರುವ ಒಟ್ಟು ಕಂಪೆನಿಗಳ ಶೇ. 87ರ ಪೈಕಿ ಶೇ. 61 ಕಂಪೆನಿಗಳು ಶೇ. 5ರಿಂದ ಶೇ. 10ರಷ್ಟು ವೇತನ ಹೆಚ್ಚಿಸುವ ಕಾರ್ಯಯೋಜನೆ ಹೊಂದಿವೆ. 2020ರಲ್ಲಿ ಸರಾಸರಿ ವೇತನ ಏರಿಕೆ ಪ್ರಮಾಣ ಶೇ. 6.1ರಷ್ಟು ಇದ್ದರೆ, 2021ರಲ್ಲಿ ಅದು ಶೇ. 7.3ಕ್ಕೆ ಜಿಗಿಯಬಹುದು ಎಂದು ಸಮೀಕ್ಷೆ ಯಲ್ಲಿ ವ್ಯಕ್ತವಾಗಿದೆ. ಆನ್ ಇಂಡಿಯಾ ವೇತನ ಸಮೀಕ್ಷೆಯು 20 ವಿಧದ ಕೈಗಾರಿಕೆಗಳ 1,050 ಸಂಸ್ಥೆಗಳ ಬಗ್ಗೆ ಅಧ್ಯಯನ ನಡೆಸಿದೆ. ಕೆಲವು ಕ್ಷೇತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ವೇತನ ಹೆಚ್ಚಳ ವಾಗಲಿದ್ದರೆ, ಸೋಂಕಿನ ಹೊಡೆತಕ್ಕೆ ಸಿಕ್ಕಿರುವ ಮತ್ತೆ ಕೆಲವು ಕ್ಷೇತ್ರಗಳು ಕಡಿಮೆ ಪ್ರಮಾಣದಲ್ಲಿ ವೇತನ ಪರಿಷ್ಕರಣೆ ಮಾಡುವ ಸಾಧ್ಯತೆಗಳಿವೆ ಎಂದು ಕಂಡುಕೊಳ್ಳಲಾಗಿದೆ.
ಸಮೀಕ್ಷೆಯ ಬಗ್ಗೆ ಮಾತನಾಡಿದ ಆನ್ ಇಂಡಿಯಾದ ಪರ್ಫಾಮೆನ್ಸ್ ಆ್ಯಂಡ್ ರಿವಾರ್ಡ್ಸ್ ಸೊಲ್ಯೂಷನ್ಸ್ ಪ್ರಾಕ್ಟೀಸ್‌ನ ನಿರ್ದೇಶಕ ನವನೀತ್ ರತ್ತಂ, 2020ರಲ್ಲಿ ಸರಾಸರಿ ವೇತನ ಹೆಚ್ಚಳ ಪ್ರಮಾಣ ಶೇ. 6.1 ಆಗಿದ್ದು, ಇದು ಐತಿಹಾಸಿಕವಾಗಿ ಭಾರೀ ಕಡಿಮೆ. 2008ರ ಆರ್ಥಿಕ ಹಿಂಜರಿತದ ಬಳಿಕ ಶೇ. 6.3ರ ಸರಾಸರಿಯಲ್ಲಿ ವೇತನ ಹೆಚ್ಚಳವಾಗಿತ್ತು ಎಂದಿದ್ದಾರೆ.
ಯಾವ ಕ್ಷೇತ್ರದಲ್ಲಿ ಹೆಚ್ಚು?
– ಮಾಹಿತಿ ತಂತ್ರಜ್ಞಾನ
– ಔಷಧೋದ್ಯಮ l ಜೀವ ವಿಜ್ಞಾನ
– ಮಾಹಿತಿ ತಂತ್ರಜ್ಞಾನ ಸಂಬಂಧಿ ಸೇವೆ
ಯಾವ ಕ್ಷೇತ್ರದಲ್ಲಿ ಕಡಿಮೆ?
– ಆತಿಥ್ಯ ಕ್ಷೇತ್ರ l ರಿಯಲ್ ಎಸ್ಟೇಟ್
– ಮೂಲ ಸೌಕರ್ಯ ಮತ್ತು ಎಂಜಿನಿಯರಿಂಗ್ ಸೇವೆಗಳು