Advertisement

ವೇತನ ಸ್ಥಗಿತಕ್ಕೆ ಆಕ್ರೋಶ

03:47 PM Dec 04, 2019 | Team Udayavani |

ಬಂಗಾರಪೇಟೆ: ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜನಾಧಿಕಾರ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

Advertisement

ಜನಾಧಿಕಾರ ಸಂಘಟನೆ ಮುಖಂಡ ರಾಜಪ್ಪ ಮಾತನಾಡಿ, 2019-20ನೇ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ನೀಡಲಾಗುವುದಿಲ್ಲ ಎಂದು ನ.2ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿರುವುದು, ಹಿಂದುಳಿದ ವರ್ಗಗಳ ಮಕ್ಕಳನ್ನು ಶಿಕ್ಷಣ ದಿಂದಲೇ ದೂರ ಇಡುವ ದುರಾಲೋಚನೆಯಾಗಿದೆ ಎಂದು ಆರೋಪಿಸಿದರು.

ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆ: ರಾಜ್ಯ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಈ ನಿರ್ಧಾರದಿಂದ ರಾಜ್ಯದ 15 ಲಕ್ಷ ಮಕ್ಕಳಿಗೆ ಅನ್ಯಾಯವಾಗಿದೆ. ಶೈಕ್ಷಣಿಕ ಪ್ರಗತಿ ಕುಂಟಿತವಾಗಲಿದೆ. ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡಿ ಅವರ ಅಭಿವೃದ್ಧಿ ಆಗದ ರೀತಿ ನೋಡಿಕೊಳ್ಳುವ ಹುನ್ನಾರ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣದಿಂದ ವಂಚಿತರಾಗುವ ಆತಂಕ: ರೈತ ಸಂಘದ ಅಧ್ಯಕ್ಷ ಟಿ.ಎನ್‌. ರಾಮೇಗೌಡ ಮಾತನಾಡಿ, ಕೋಲಾರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮರ್ಪಕ ಮಳೆ ಇಲ್ಲದೇ, ರೈತರು ಕಂಗಾಲಾಗಿ ಕೃಷಿ ಬಿಟ್ಟು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ನಿಲ್ಲಿಸಿದರೆ ಈ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರ ನ್ನಾಗಿ ಮಾಡುವ ಆತಂಕ ವ್ಯಕ್ತಪಡಿಸಿದರು.

ಆದೇಶ ವಾಪಸ್‌ ಪಡೆಯಿರಿ: ದಲಿತ ಮುಖಂಡ ಅಜಿತ್‌ಕುಮಾರ್‌ ಮಾತನಾಡಿ, ಸ್ವಾತಂತ್ರ್ಯ ಬಂದಾಗಿ ನಿಂದಲೂ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ವಲ್ಪ ಪ್ರಮಾಣದ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕುವ ಕೆಲಸ ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಬಡ ಮಕ್ಕಳನ್ನು ಶೈಕ್ಷಣಿಕವಾಗಿ ಮುಗಿಸುವ ಪ್ರಯತ್ನ ನಡೆಸುತ್ತಿದೆ. ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಕೆ.ಬಿ.ಚಂದ್ರ ಮೌಳೇಶರ್‌, ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಆಯುಕ್ತರಿಗೆ ಪತ್ರ ರವಾನಿಸುವುದಾಗಿ ಹೇಳಿದರು.

Advertisement

ಜನಾಧಿಕಾರ ಸಂಘಟನೆ ಜಿಲ್ಲಾಧ್ಯಕ್ಷ ಕೆ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ಮಾಲತಿ, ತಾಲೂಕು ಅಧ್ಯಕ್ಷ ಎಸ್‌. ಕೆ.ಜಗದೀಶ್‌, ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್‌, ಲಯನ್‌ ಜಗದೀಶ್‌, ಡಿಎಸ್‌ಎಸ್‌ ಕೆ ಅಧ್ಯಕ್ಷ ವಿ.ಯಲ್ಲಪ್ಪ, ಶಾಂತಮ್ಮ ಕೃಷ್ಣಮೂರ್ತಿ, ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಆದಿನಾರಾಯಣ,

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎಂ.ಜಿ. ವೆಂಕಟೇಶ್‌, ಸುಭಾಷ್‌, ಮುನಿಕೃಷ್ಣ, ಮಾರುತಿ ಪ್ರಸಾದ್‌, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next