Advertisement

ಕೆಲಸಕ್ಕೆ ತಕ್ಕಂತೆ ದೊರೆಯದ ವೇತನ-ಅಸಮಾಧಾನ

03:11 PM May 31, 2019 | Suhan S |

ಶಿರಸಿ: ಸಾರಿಗೆ ಆಡಳಿತಾಧಿಕಾರಿಗಳು ರಚಿಸುವ ಬಸ್‌ ವೇಳಾಪಟ್ಟಿಯು ಚಾಲಕ ಹಾಗೂ ನಿರ್ವಾಹಕರ ವಾಸ್ತವಿಕ ದುಡಿಮೆಗೆ ವೇತನ ದೊರೆಯದಂತೆ ರೂಪಿಸಲಾಗುತ್ತಿದೆ. ಇದರಿಂದ ನೌಕರರು 12 ತಾಸು ಕರ್ತವ್ಯ ಮಾಡಿದರೂ ಕೇವಲ 8 ತಾಸು ಎಂದು ಪರಿಗಣಿಸಲಾಗುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ| ಕೆ.ಎಸ್‌ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಜವಳಿ ಸಭಾಂಗಣದಲ್ಲಿ ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಶಿರಸಿ ವಿಭಾಗ ಆಯೋಜಿಸಿದ್ದ ಪ್ರಾದೇಶಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರತಿ ವಿಭಾಗದಲ್ಲೂ ಈ ಸಮಸ್ಯೆ ಇದೆ. ಡಿಪೋದಿಂದ ಹೊರಡುವ ಹಾಗೂ ಬಸ್ಸನ್ನು ಡಿಪೋಕ್ಕೆ ತಂದು ನಿಲ್ಲಿಸುವ ಸಮಯ ಪರಿಶೀಲಿಸಬೇಕು. ಬಸ್‌ ನಿಲ್ದಾಣದಿಂದ ಬಸ್‌ ಹೊರಡುವ ಸಮಯವಲ್ಲ. ನಿಜವಾಗಿ ಪ್ರಯಾಣಕ್ಕೆ ಬೇಕಾದ ಸಮಯ ದಾಖಲಿಸಬೇಕು. ಅದು ಬಿಟ್ಟು ಈಗಿನ ಮಾದರಿಯಲ್ಲ ಎಂದರು. ಫಾರಂ 4ನ್ನು ರಚಿಸುವಾಗ ಮೋಟಾರ್‌ ವಾಹನ ಕಾರ್ಮಿಕರ ಕಾನೂನಿನನ್ವಯ ರೂಪಿಸಲಾಗುತ್ತಿಲ್ಲ. ಕನಿಷ್ಠ 3ರಿಂದ 4ಗಂಟೆಗಳ ಹೆಚ್ಚಿನ ಅವಧಿಯಲ್ಲಿ ಕಾರ್ಮಿಕರು ಶ್ರಮಿಸುತ್ತಿರುವುದು ಗೋಚರಿಸಿದರೂ ಪೂರ್ಣ ವೇಳೆಗೆ ವೇತನ ನೀಡದೆ ನೌಕರರನ್ನು ಸತಾಯಿಸುವ ಕಾರ್ಯ ನಡೆಯುತ್ತಿದೆ. ಕೂಡಲೆ ಶೆಡ್ಯುಲ್ ಫಾರಂ 4ನ್ನು ಕಾನೂನು ಮೇರೆಗೆ ಕಟ್ಟುನಿಟ್ಟಾಗಿ ರಚಿಸಿ, ಅದರಂತೆಯೆ ಚಾಲಕ-ನಿರ್ವಾಹಕರಿಗೆ ವೇತನ ನೀಡುವಂತಾಗಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಕೊನೆ ಸಂಚಾರಕ್ಕೆ ಗ್ರಾಮೀಣ ಭಾಗಕ್ಕೆ ವಸತಿ ಹೋಗುವ ಚಾಲಕ ಮತ್ತು ನಿರ್ವಾಹಕರಿಗೆ ತಂಗಲು ವಿಶ್ರಾಂತಿ ಗೃಹದ ವ್ಯವಸ್ಥೆ ಮಾಡಿಕೊಡಬೇಕು. ಬಸ್‌ ಡಿಪೋಗಳಲ್ಲಿ ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ ತಂಗಲು ಪ್ರತ್ಯೇಕ ವಿಶ್ರಾಂತಿ ಗ್ರಹದ ಅವಶ್ಯಕತೆ ಇದೆ. ಡಿಪೋಗಳನ್ನು ಸ್ವಚ್ಛವಾಗಿಡುವುದರ ಜೊತೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಬೇಕು ಎಂದ ಅವರು, ಈಗ ಇವ್ಯಾವವೂ ಇಲ್ಲ ಎಂದೂ ಪ್ರತಿಪಾದಿಸಿದರು.

ನೌಕರರ ರಜಾ ಮಂಜೂರಿ ಕುರಿತಾಗಿ ಯಾವುದೇ ತಾರತಮ್ಯ ಎಸಗದೆ ರಜೆಗಳನ್ನು ಸಕಾಲದಲ್ಲಿ, ಮಾನವೀಯತೆ ದೃಷ್ಟಿಯಿಂದಲೂ ಜಾರಿಗೊಳಿಸಬೇಕು. ಮಹಿಳಾ ಚಾಲಕ ಮತ್ತು ನಿರ್ವಾಹಕರ ಭದ್ರತೆಯ ದೃಷ್ಟಿಯಿಂದ ಬೆಳಗಿನ ಅವಧಿಯಯಲ್ಲಿಯೇ ಡ್ಯೂಟಿಗಳನ್ನು ಹಂಚಬೇಕು. ಮಹಿಳಾ ಸಿಬ್ಬಂದಿ ಮೇಲೆ ಸಂಸ್ಥೆಯೊಳಗೆ ನಡೆಯುತ್ತಿರುವ ಕಿರುಕುಳವನ್ನು ತಪ್ಪಿಸಿ ಸೂಕ್ತ ಭದ್ರತೆ ಒದಗಿಸುವ ಜೊತೆಯಲ್ಲಿ ಕೊರತೆ ಇರುವ ಸಿಬ್ಬಂದಿ ಸೇರ್ಪಡೆಗೊಳಿಸಬೇಕು ಎಂದು ಶರ್ಮಾ ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಜಯದೇವರಾಜ ಅರಸ, ಖಜಾಂಚಿ ದೇವರಾಜೆ ಅರಸ್‌, ಪ್ರಮುಖರಾದ ಸಂಜೀವ ಶೆಟ್ಟಿ, ಮುಕುಂದ, ಪ್ರಕಾಶ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next