ರೋಣ: ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಸಹಾಯಕರಿಗೆ 4 ತಿಂಗಳಿಂದ ವೇತನ ನೀಡದ್ದನ್ನು ಖಂಡಿಸಿ, ಇಲಾಖೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರ ನಿಗ್ರಹಿಸಬೇಕೆಂದು ಒತ್ತಾಯಿಸಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲಾ ಆರೋಗ್ಯಾಧಿಕಾರಿ ವಿರೂಪಾಕ್ಷರಡ್ಡಿ ಮಾದಿನೂರ ಅವರ ಎದುರು ಸಾಮೂಹಿಕವಾಗಿ ದೂರುವುದರ ಜೊತೆಗೆ ಪ್ರತಿಭಟನೆ ನಡೆಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಎಂ.ಎ. ಹಾದಿಮನಿ ಹಾಗೂ ಯಲ್ಲಪ್ಪ ಬೂದಿಹಾಳ ಮಾತನಾಡಿ, ಇಲಾಖೆಯಲ್ಲಿ ಲಂಚವನ್ನು ಕೊಟ್ಟರೆ ಮಾತ್ರ ಸಿಬ್ಬಂದಿಗೆ ವೇತನವನ್ನು ಮಂಜೂರು ಮಾಡುತ್ತಾರೆ. ಯಾವ ಸಿಬ್ಬಂದಿ ಲಂಚ ಕೊಡಲು ಹಿಂದೇಟು ಹಾಕುತ್ತಾರೋ ಅವರಿಗೆ ವೇತನ ನೀಡುವುದಿಲ್ಲ. ಇದರಿಂದ ಕಳೆದ ನಾಲ್ಕು ತಿಂಗಳಿಂದ ಅನೇಕ ಸಿಬ್ಬಂದಿ ಕುಟುಂಬಗಳು ಪಡಬಾರದ ಕಷ್ಟ ಅನುಭವಿಸುತ್ತಿವೆ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಅಧಿಕಾರಿ ಮಾದಿನೂರ, ಯಾವ ವ್ಯಕ್ತಿ ನಿಮ್ಮಿಂದ ಹಣ ಪಡೆಯುತ್ತಾನೋ ಅವನ ಹೆಸರನ್ನು ನಮೂದಿಸಿ ಒಂದು ಲಿಖೀತವಾದ ದೂರನ್ನು ನೀಡಿ. ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ. ಒಂದು ವೇಳೆ ನಾನು ಹಣವನ್ನು ನಿಮ್ಮ ಬಳಿ ಕೇಳಿದ್ದರೆ ನನ್ನ ಬಗ್ಗೆಯೂ ದೂರು ನೀಡಿ ಎಂದು ಸಿಬ್ಬಂದಿಯನ್ನು ಸಮಾಧಾನ ಮಾಡಿದರು. ಇಷ್ಟಕ್ಕೆ ಸುಮ್ಮನಾಗದ ಸಿಬ್ಬಂದಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲ ತೊಂದರೆಯಾಗುತ್ತಿದೆ. ಅದು ನಿಮಗೂ ಗೊತ್ತಿದೆ. ಆದ್ದರಿಂದ ಸಾಮೂಹಿಕವಾಗಿ ನಮಗೆ ಬೇರೆ ಕಡೆ ವರ್ಗವಣೆ ಮಾಡಿ. ಇಲ್ಲವಾದರೆ ಅವನನ್ನು ಬೇರೆ ಕಡೆ ವರ್ಗವಣೆ ಮಾಡಿ ಎಂದು ಮನವಿ ಮಾಡಿಕೊಂಡರು.
ರೋಣ ಮತ್ತು ಗಜೇಂದ್ರಗಡ ಸೇರಿದಂತೆ ಅನೇಕ ಪಿಎಚ್ಸಿಗಳ ಸಿಬ್ಬಂದಿಗೆ ಬರಬೇಕಾದ 6ನೇ ವೇತನ ಆಯೋಗದ ವ್ಯತ್ಯಾಸದ ಮೊತ್ತವನ್ನು ನೀಡಿಲ್ಲ. ಆದರೆ ನರೇಗಲ್ ಮತ್ತು ಅಬ್ಬಿಗೇರಿ ಸಿಬ್ಬಂದಿಗೆ ಈಗಾಗಲೇ ಜಮಾ ಮಾಡಿದ್ದೀರಿ ಏಕೆ? ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ? ಎಂದು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಎಲ್ಲ ಸಿಬ್ಬಂದಿ ಒಕ್ಕೊರಲಿನಿಂದ ಪ್ರಶ್ನೆ ಮಾಡಿದರು. ಸಭೆ¿ಲ್ಲಿ ಆರೋಗ್ಯ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ವೈದ್ಯರು ಸೇರಿದಂತೆ ಆರೋಗ್ಯ ಸಹಾಯಕರು ಹಾಜರಿದ್ದರು.
Advertisement
ಸೋಮವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆಯಬೇಕಿದ್ದ ತಾಲೂಕು ಆರೋಗ್ಯ ಇಲಾಖೆ ಮಾಸಿಕ ಸಭೆಗೆ ಹಾಜರಾಗದೆ, ಇಲಾಖೆಯ ಎಲ್ಲ ಸಿಬ್ಬಂದಿ ದೂರ ಉಳಿದು ಪ್ರತಿಭಟನೆ ನಡೆಸಿದರು. 12 ಗಂಟೆಗೆ ರೋಣ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಮಾದಿನೂರ ಪಕ್ಕದಲ್ಲಿಯೇ ಸಿಬ್ಬಂದಿ ಪ್ರತಿಭಟನಾ ಸ್ಥಳವಿತ್ತು. ಅಲ್ಲಿಗೆ ಬರದೆ ಇರುವುದರಿಂದ ರೊಚ್ಚಿಗೆದ್ದ ಸಿಬ್ಬಂದಿ ಡಿಎಚ್ಒ ವಾಹನಕ್ಕೆ ಮುತ್ತಿಗೆ ಹಾಕಿದರು. ನಂತರ ಡಿಎಚ್ಒ ಮಾದಿನೂರ ಮಾತನಾಡಿ, ಸಭಾಂಗಣಕ್ಕೆ ಬನ್ನಿ ಎಲ್ಲವನ್ನು ಅಲ್ಲಿಯೇ ಚರ್ಚೆ ಮಾಡೋಣ ಎಂದರು. ಇದಕ್ಕೆ ಸ್ಪಂದಿಸಿದ ಸಿಬ್ಬಂದಿ ಸಭಾಂಗಣಕ್ಕೆ ತೆರಳಿದರು. ಇತ್ತ ಸಭೆಯು ಪ್ರಾರಂಭವಾಗುತ್ತಿದ್ದಂತೆ ವೇತನ ಜೊತೆಗೆ ಪ್ರಾಂತ್ಯವಾರು ವೇತನ ತಾರತಮ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಗೊಂದಲ-ಗಲಾಟೆ ನಡೆಯಿತು.
Related Articles
ಇಲಾಖೆ ಸಿಬ್ಬಂದಿ ವೇತನ ನೀಡಲು ಯಾವ ವ್ಯಕ್ತಿ ಹಣ ಪಡೆಯುತ್ತಾನೋ ಆತನ ವಿರುದ್ಧ ಸೂಕ್ತ ದಾಖಲೆ ಕೊಟ್ಟರೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನಾನು ಬಂದು ಎರಡು ತಿಂಗಳಾಗಿದೆ. ಈಗಾಗಲೇ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದೇನೆ. ಬಜೆಟ್ ಬಂದ ಕೂಡಲೇ ಸಿಬ್ಬಂದಿ ವೇತನ ಮಂಜೂರು ಮಾಡುತ್ತೇನೆ. –ವಿರೂಪಾಕ್ಷರಡ್ಡಿ ಮಾದಿನೂರ, ಜಿಲ್ಲಾ ಆರೋಗ್ಯ ಅಧಿಕಾರಿ
Advertisement