Advertisement

ಸರಕಾರಿ ಉದ್ಯೋಗಿಗಳಿಗೆ ವೇತನ ವಿಳಂಬದ ಬಿಸಿ!

10:01 AM Dec 14, 2019 | mahesh |

ಮಂಗಳೂರು: ಬಹಳ ವರ್ಷಗಳ ಅನಂತರ ರಾಜ್ಯದ ಬಹುತೇಕ ಕಡೆ ಹೆಚ್ಚಿನ ಸರಕಾರಿ ಉದ್ಯೋಗಿಗಳಿಗೆ ವೇತನವು ವಿಳಂಬವಾಗಿ ಪಾವತಿಯಾಗಿದೆ. ಅಲ್ಲದೆ ಕಾಲೇಜು ಉಪನ್ಯಾಸಕರು ಸೇರಿದಂತೆ ಕೆಲವು ಇಲಾಖೆಗಳ ಉದ್ಯೋಗಿಗಳಿಗೆ ಇನ್ನೂ ಒಂದೆರಡು ತಿಂಗಳ ಸಂಬಳ ಬಂದಿಲ್ಲ.

Advertisement

ಸಾಮಾನ್ಯವಾಗಿ ತಿಂಗಳ ಕೊನೆ ಅಥವಾ ಅನಂತರದ ಒಂದೆರಡು ದಿನದೊಳಗೆ ವೇತನ ಪಾವತಿ ವಾಡಿಕೆ. ಆದರೆ ವಿಧಾನ ಸೌಧದಿಂದ ಹಿಡಿದು ರಾಜ್ಯದೆಲ್ಲೆಡೆ ವಿವಿಧ ಇಲಾಖೆಗಳ ಸರಕಾರಿ ಉದ್ಯೋಗಿಗಳಿಗೆ ನವೆಂಬರ್‌ ವೇತನವು ಡಿಸೆಂಬರ್‌ 2ನೇ ವಾರದಿಂದ ಪಾವತಿಯಾಗು ತ್ತಿದೆ. ಕೆಲವು ಇಲಾಖೆಗಳ ಸಿಬಂದಿಗೆ ಇನ್ನೂ ಆಗಿಲ್ಲ. ಸರಕಾರಿ ಪಿಯು-ಪದವಿ ಉಪನ್ಯಾಸಕರು ಒಂದೆರಡು ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 7 ವರ್ಷಗಳ ಬಳಿಕ ಈ ರೀತಿ ವೇತನ ವಿಲೇವಾರಿ ವಿಳಂಬವಾಗಿದ್ದು, ವೇತನ ಪಾವತಿಯನ್ನು “ಖಜಾನೆ-1′ ರಿಂದ “ಖಜಾನೆ-2’ಕ್ಕೆೆ ವರ್ಗಾಯಿಸಿರುವುದು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಯಾಕೆ ವಿಳಂಬ?
ಸರಕಾರಿ ಉದ್ಯೋಗಿಗಳ ವೇತನ ಮತ್ತು ಇತರ ಖರ್ಚಿಗೆ ಸಂಬಂಧಿಸಿದ ವ್ಯವಹಾರಗಳಿಗೆ “ಖಜಾನೆ-1’ರಡಿ ಹಣ ಪಾವತಿಯಾಗುತ್ತಿತ್ತು. “ಖಜಾನೆ-2′ ಜಾರಿಯಾದ ಬಳಿಕ ಹಂತಹಂತವಾಗಿ ವೇತನ ಪಾವತಿಯನ್ನು ಆನ್‌ಲೈನ್‌ಗೆ ಲಿಂಕ್‌ ಮಾಡಲಾಗುತ್ತಿದೆ. ಖಜಾನೆ-1 ವ್ಯವಸ್ಥೆಯಡಿ ಬಿಲ್‌ಗ‌ಳನ್ನು ಮ್ಯಾನುವಲ್‌ ಆಗಿ ಸಲ್ಲಿಸಿ ಚೆಕ್‌ ಮೂಲಕ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಆಗ ಬೇರೆ ಅನುದಾನವನ್ನೂ ವೇತನ ಪಾವತಿಗೆ ಬಳಸಿಕೊಳ್ಳಬಹುದಿತ್ತು.

ಖಜಾನೆ-2 ಅಡಿ ಆನ್‌ಲೈನ್‌ನಲ್ಲೇ ಅನುಮೋದನೆಯಾಗಿ ಹಣ ಬಿಡುಗಡೆ ಯಾಗುತ್ತದೆ. ಇದರಡಿ ವೇತನ ಅನು ದಾನ ಪಡೆಯಬೇಕಾದರೆ ಹಣಕಾಸು ಇಲಾಖೆ ಮಾರ್ಗಸೂಚಿ ಆಧರಿಸಿ ಲೆಕ್ಕಪತ್ರ ಗಳನ್ನು ಇಲಾಖೆಗಳು ಮುಂಚಿತವಾಗಿ ಒದಗಿಸಬೇಕು. ಪೂರ್ವಾ ನುಮತಿ ಇಲ್ಲದೆ ಬೇರೆ ಅನುದಾನ ಬಳಕೆ ಅಸಾಧ್ಯ.

ಈ ನಡುವೆ ಬಿಳಿ, ಪಿಂಕ್‌ ಮತ್ತು ಹಳದಿ ಮಾದರಿ ಬಿಲ್‌ಗ‌ಳ ಪೈಕಿ ಸುಮಾರು 57 ಇಲಾಖೆಗಳ ಆಡಳಿತಕ್ಕೆ ಸಂಬಂಧಿಸಿದ ವೇತನ (ವೈಟ್‌ ಬಿಲ್‌) ಪಾವತಿಯನ್ನು ಖಜಾನೆ-2ರಲ್ಲಿ ತರಲಾಗಿದೆ. ಇದು ನವೆಂಬರ್‌ ತಿಂಗಳ ವೇತನ ವಿಳಂಬಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ಎಚ್‌ಆರ್‌ಎಂಎಸ್‌ ಪೋರ್ಟಲ್‌ನಲ್ಲಿ ಪ್ರತಿ ತಿಂಗಳ 20ರೊಳಗೆ ಸಂಬಳ ಪಾವತಿ ಪ್ರಾರಂಭಿಸಲಾಗುತ್ತದೆ. ಆದರೆ ಈ ಬಾರಿ ತಾಂತ್ರಿಕ ಸಮಸ್ಯೆಯಿಂದಾಗಿ ನ.28ಕ್ಕೆ ಮಾಡಲಾಗಿದ್ದು, ಬಳಿಕ ಸರಕಾರಿ ಪ್ರಕ್ರಿಯೆ ಮುಗಿದು ಆರ್ಥಿಕ ಇಲಾಖೆಯಿಂದ ವೇತನ ಅನುದಾನ ಅನುಮೋದನೆಯೂ ವಿಳಂಬವಾಗಿದೆ ಎಂದು ಖಜಾನೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಉಪನ್ಯಾಸಕರಿಗೆ ಸಂಬಳವಿಲ್ಲ !
ಇದಲ್ಲದೆಯೂ ಪಿಯು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರಲ್ಲಿ ಹೆಚ್ಚಿನವರಿಗೆ ಕಳೆದ ತಿಂಗಳ ವೇತನ ಇನ್ನೂ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಎರಡು ತಿಂಗಳ ವೇತನ ಬಾಕಿಯಿದೆ. ಇದಕ್ಕೆ ಅನುದಾನ ಕೊರತೆಯೂ ಕಾರಣ ಎನ್ನಲಾಗುತ್ತಿದೆ. ವೇತನದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡ ಕಾರಣಕ್ಕೆ ಹೀಗಾಗಿದೆ. ಪೊಲೀಸ್‌, ಲೋಕೋಪಯೋಗಿ, ಕಂದಾಯ, ತಾಂತ್ರಿಕ ಶಿಕ್ಷಣ ಇಲಾಖೆ ಗಳಲ್ಲೂ ಅನುದಾನದ ಕೊರತೆ ಎದುರಾಗಿತ್ತು. ಬಳಿಕ ಅನುದಾನ ಮಂಜೂರು ಮಾಡಿಸಿ ಪಾವತಿಸ ಲಾಗಿದೆ. ಉದಾಹರಣೆಗೆ, ತನಗೆ ಸೆಪ್ಟಂಬರ್‌ – ಅಕ್ಟೋಬರ್‌ ವೇತನವನ್ನು ನವೆಂಬರ್‌ ನಲ್ಲಿ ಪಾವತಿಸಿದ್ದು, ನವೆಂಬರ್‌ ಸಂಬಳ ಇನ್ನೂ ಬಂದಿಲ್ಲ ಎಂದು ದ.ಕ. ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅನುದಾನ ಬಿಡುಗಡೆ ಸಂದೇಶ
ಪಿಯು ಕಾಲೇಜು ಉಪನ್ಯಾಸಕರ ಬಾಕಿಯಿರುವ ವೇತನ ಪಾವತಿಗೆ ಅನುದಾನವನ್ನು ಖಜಾನೆ-2ರಲ್ಲಿ ಬಿಡುಗಡೆ ಮಾಡಿರುವುದಾಗಿ ಎಲ್ಲ ಪ್ರಾಂಶುಪಾಲರಿಗೆ ಗುರುವಾರ ಎಸ್‌ಎಂಎಸ್‌ ರವಾನೆಯಾಗಿದೆ. ಇನ್ನು ಸಂಬಳದ ಬಿಲ್‌ಗ‌ಳನ್ನು ಖಜಾನೆ-2ಕ್ಕೆ ವರ್ಗಾಯಿಸಿಕೊಂಡು ಪ್ರಕ್ರಿಯೆ ನಡೆಸುವುದಾಗಿ ಸಂದೇಶದಲ್ಲಿ ಭರವಸೆ ನೀಡಲಾಗಿದೆ. ಸೋಮವಾರದ ವೇಳೆ ವೇತನ ಜಮೆಯಾಗುವ ಸಾಧ್ಯತೆಯಿದೆ.

ಇಲ್ಲಿವರೆಗೆ ಖಜಾನೆ-1ರಡಿ ವೇತನ ಪಾವತಿಯಾಗುತ್ತಿತ್ತು. ಈಗ ಅದನ್ನು ಕೆ-2 (ಖಜಾನೆ-2) ವ್ಯವಸ್ಥೆಗೆ ಪರಿವರ್ತಿಸಿದ ಕಾರಣ ನಿರೀಕ್ಷೆಗಿಂತಲೂ ಹೆಚ್ಚು ತಡವಾಗಿ ವೇತನ ಪಾವತಿಯಾಗಿದೆ. ವಿಧಾನಸೌಧ, ವಿಕಾಸಸೌಧ ಮತ್ತು ಎಂಎಸ್‌ ಬಿಲ್ಡಿಂಗ್‌ನಲ್ಲಿನ ಉದ್ಯೋಗಿಗಳಿಗೂ ಈ ಸಲ ನವೆಂಬರ್‌ ತಿಂಗಳ ಸಂಬಳ ಡಿ.6ರ ಅನಂತರ ಪಾವತಿಯಾಗಿದೆ.  
ವೆಂಕಟರಸಪ್ಪ, ವಿಶೇಷ ಕಾರ್ಯದರ್ಶಿ, ಡಿಪಿಎಆರ್‌-ಸಚಿವಾಲಯ

ವೇತನ ಪಾವತಿ ವಿಳಂಬ ಆಗಿರುವುದು ನಿಜ. ಖಜಾನೆ-2 ವ್ಯವಸ್ಥೆಗೆ ಹಲವು ಇಲಾಖೆಗಳು ಅಪ್‌ಗ್ರೇಡ್‌ ಆಗದೆ ಹೀಗಾಗಿದೆ. ಈಗ ಬಹುತೇಕ ಉದ್ಯೋಗಿಗಳಿಗೆ ವೇತನ ಬಂದಿದೆ. ಕೇಂದ್ರ ಸರಕಾರದ ಅನುದಾನ ವಿಳಂಬ ಸಹಿತ ಇತರ ಕೆಲವು ಸಾಮಾನ್ಯ ಕಾರಣಗಳಿಂದ ಕೆಲವರಿಗೆ ವೇತನ ಇನ್ನೂ ಪಾವತಿಯಾಗದೆ ಇರಬಹುದು. ಉದ್ಯೋಗಿಗಳಿಗೆ ತೊಂದರೆಯಾಗದಂತೆ ನಮ್ಮ ಸಂಘ ಮುತುವರ್ಜಿ ವಹಿಸಿ ಸಮಸ್ಯೆಗೆ ಸ್ಪಂದಿಸುತ್ತಿದೆ.
-ಷಡಕ್ಷರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next