Advertisement

ಕಬ್ಬಿಣ ಪೈಪ್‌ ರಿಪೇರಿಗೆ ಚಿನ್ನದ ಖರ್ಚು

11:00 AM Nov 01, 2019 | |

ವಾಡಿ: ಕುಡಿಯುವ ನೀರಿನ ಗೇಣುದ್ದ ಕಬ್ಬಿಣದ ಪೈಪ್‌ ದುರಸ್ತಿ, ಬೋರ್‌ವೆಲ್‌ ಯಂತ್ರ ರಿಪೇರಿ, ಜಾಯಿಂಟ್‌ ಬಿಚ್ಚಿದ ಪೈಪ್‌ ವೆಲ್ಡಿಂಗ್‌ ಕೆಲಸಕ್ಕೆ ಬೇಕಾಬಿಟ್ಟಿ ಖರ್ಚು ಬರೆಯಲಾಗಿದೆ. ಒಂದೇ ಕೆಲಸಕ್ಕೆ ವಿವಿಧ ಹೆಸರುಗಳಡಿ ಮೂರ್ನಾಲ್ಕು ಬೋಗಸ್‌ ಖರ್ಚು ದಾಖಲಿಸಲಾಗಿದೆ. ಸಾರ್ವಜನಿಕರ ಲಕ್ಷಾಂತರ ರೂ. ತೆರಿಗೆ ಹಣ ನೀರುಪಾಲು ಮಾಡಿದ್ದೀರಿ. ನೀರು ಸರಬರಾಜಿಗಾಗಿ ಚಿನ್ನದ ಪೈಪ್‌ ಅಳವಡಿಸಿದ್ದೀರಾ? ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಬಿಜೆಪಿಯ ಪ್ರಕಾಶ ನಾಯಕ ಕಾಂಗ್ರೆಸ್‌ ಆಡಳಿತವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

Advertisement

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ 2019ನೇ ಸಾಲಿನ ಜನೆವರಿ-ಸೆಪ್ಟೆಂಬರ್‌ ತಿಂಗಳ ವರೆಗಿನ ಆದಾಯ-ಖರ್ಚು ಚರ್ಚೆ ವೇಳೆ ಈ ಪ್ರತಿರೋಧ ವ್ಯಕ್ತವಾಯಿತು.

ವಿವಿಧ ವಾರ್ಡ್‌ಗಳಲ್ಲಿ ನಡೆದ ಕುಡಿಯುವ ನೀರಿನ ಪೈಪ್‌ ದುರಸ್ತಿಗೆ ಮತ್ತು ಮೋಟಾರು ರಿಪೇರಿಗೆ ಅಗತ್ಯ ಬೆಲೆಗಿಂತ ನಾಲ್ಕುಪಟ್ಟು ಖರ್ಚು ದಾಖಲಿಸಿ ಕಾಂಗ್ರೆಸ್‌ ಆಡಳಿತ ಅವ್ಯವಹಾರ ನಡೆಸಿದೆ. 1.5 ಎಚ್‌ಪಿ ಮೋಟಾರ್‌ ರಿಪೇರಿಗೆ 18000 ರೂ., ವಾಲ್‌ ರಿಪೇರಿಗೆ 10,000 ರೂ., ನಳ ರಿಪೇರಿಗೆ 5000 ರೂ. ಹೀಗೆ ಸಾವಿರ ರೂ. ಖರ್ಚಿನ ಕೆಲಸಗಳಿಗೆ ಲಕ್ಷಾಂತರ ರೂ. ಬಿಲ್‌ ಬರೆದು ಕೇರ್‌ಸಿಟಿ ಅನುದಾನ ಲೂಟಿ ಮಾಡಿ, ಜನರಿಗೆ ಮೋಸ ಮಾಡಿದ್ದೀರಿ ಎಂದು ಅಧಿಕಾರಿಗಳ
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದ್ರಾ ನಗರದ ಜನರಿಗೆ ಕಳೆದ 50 ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೋರ್‌ ವೆಲ್‌ ಅಳವಡಿಸಲು ಒತ್ತಾಯಿಸಿದ ಬಳಿಕ ಮೂರು ಕಿ.ಮೀ ದೂರದ ಕಲ್ಲು ಗಣಿಯಲ್ಲಿ ಬೋರ್‌ವೆಲ್‌ ಹಾಕಲಾಗಿದೆ. ಬಡಾವಣೆ ವರೆಗೆ ಪೈಪ್‌ಲೈನ್‌ ಅಳವಡಿಸಿಲ್ಲ. ಜನರು ನೀರಿಗಾಗಿ ತತ್ತರಿಸುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದೀರಿ. ಅಧ್ಯಕ್ಷರು ಮನೆಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಕೈ ಸದಸ್ಯ ತಿಮ್ಮಯ್ಯ ಪವಾರ ತಮ್ಮದೇ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಸಭೆಯಲ್ಲಿ ಪೌರಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವಂತೆ ಮತ್ತು ಗಾಂಧೀಜಿ ಪ್ರತಿಮೆ ಸ್ಥಾಪನೆಗಾಗಿ ಜಿಲ್ಲಾಧಿ ಕಾರಿಗೆ ಪತ್ರ ಬರೆದು ಅನುಮೋದನೆ ಪಡೆಯಲು ನಿರ್ಣಯ ಮಂಡಿಸಲಾಗಿತ್ತು. ಆದರೂ ನೀವು ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ಸದಸ್ಯ ದೇವಿಂದ್ರ ಕರದಳ್ಳಿ
ಮುಖ್ಯಾ ಧಿಕಾರಿ ವಿರುದ್ಧ ದೂರಿದರು.

Advertisement

ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸದಸ್ಯ ಶರಣು ನಾಟೀಕಾರ, ಮರಗಪ್ಪ ಕಲಕುಟಗಿ, ಶೋಭಾ ಪವಾರ, ಸುಗಂಧಾ ಜೈಗಂಗಾ, ಅನಿತಾ ರಾಠೊಡ, ಅಫÕರಾಬೇಗಂ, ಸುಶೀಲಾಬಾಯಿ ಮೌಸಲಗಿ, ಗುಜ್ಜಾಬಾಯಿ ಸಿಂಗೆ, ಝರೀನಾಬೇಗಂ, ಪೃಥ್ವಿರಾಜ, ರಾಜೇಶ ಅಗರವಾಲ ಚರ್ಚೆ ನಡೆಸಿದರು.

ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಕಿರಿಯ ಅಭಿಯಂತರರಾದ ಶಾಂತಪ್ಪ ಹೊಸೂರ, ರಾಜಕುಮಾರ ಅಕ್ಕಿ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ಕಂದಾಯ ಅಧಿ ಕಾರಿ ಎಂ. ಪಂಕಜಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next