ವಾಡಿ (ಕಲಬುರಗಿ): ರಸ್ತೆ ಅಭಿವೃದ್ಧಿಗೆ ಅಡಿಗಲ್ಲು ನೆರವೇರಿಸಲು ಮಂಗಳವಾರ ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮಕ್ಕೆ ಬರುತ್ತಿದ್ದಂತೆ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಲು ಹಿಡಿದು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಹತ್ತಾರು ಜನ ಶಾಲಾ ವಿದ್ಯಾರ್ಥಿನಿಯರ ಜತೆ ಸಚಿವರ ಮುಂದೆ ಕೈಮುಗಿದು ನಿಂತ ಬಾಲಕಿಯ ದುಃಖ ಖರ್ಗೆ ಮನಸ್ಸು ಕರಗುವಂತೆ ಮಾಡಿತು.
ಬಾಲಕೀಯ ಸಮಸ್ಯೆ ಕೇಳಲು ರಸ್ತೆಯಲ್ಲೇ ನಿಂತ ಪ್ರಿಯಾಂಕ್ ಖರ್ಗೆ, ಮಕ್ಕಳ ಕಷ್ಟ ಕೇಳಿ ಒಂದು ಕ್ಷಣ ಮೌನಕ್ಕೆ ಜಾರಿದರು. ಸರ್ ನಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲ. ಬಯಲು ಪ್ರದೇಶದ ಮುಳ್ಳುಕಂಟಿ ಆಸರೆಗೆ ಹೋಗಿ ಮೂತ್ರ ಮಾಡಿ ಮುಜುಗರ ಅನುಭವಿಸುತ್ತಿದ್ದೇವೆ. ಬಿಸಿಯೂಟ ತಿಂದ ಮೇಲೆ ಕುಡಿಯಲು ನೀರಿಲ್ಲ. ಬಹಳ ದಿನಗಳಿಂದ ನಾವೆಲ್ಲರೂ ಕಷ್ಟ ಅನುಭವಿಸುತ್ತಿದ್ದೇವೆ. ದಯವಿಟ್ಟು ನಮ್ಮ ಶಾಲೆಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿ ಕೊಡ್ರಿ ಸರ್ ನಿಮಗೆ ಪುಣ್ಯ ಬರ್ತದಾ… ಎಂದು ಬಾಲಕಿ ಮರೆಮ್ಮ ಗೋಗೇರ ಕೈಮುಗಿದು ಕಣ್ಣೀರಿಟ್ಟ ಪರಿಗೆ ಸಚಿವ ಖರ್ಗೆ ಕರಗಿದರು.
ತತ್ ಕ್ಷಣ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ಕೂಡಲೇ ಶಾಲೆಗೆ ಬೇಕಾದ ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯ ಒದಗಿಸಿರಿ. ಅದಕ್ಕೆಷ್ಟು ಕರ್ಚಾಗುತ್ತದೋ ವರದಿ ಕೊಡಿ ಅನುದಾನ ಕೊಡುತ್ತೇನೆ ಎಂದು ಆದೇಶಿಸಿದರು. ಸಚಿವರ ಈ ಪ್ರತಿಕ್ರಿಯೆ ಆಲಿಸಿದ ಶಾಲಾ ಮಕ್ಕಳು ಸಂತಸದಿಂದ ಸಂಭ್ರಮಿಸಿ ಶಾಲೆಯತ್ತ ತೆರಳಿದರು.