ವಾಡಿ : ಬೀದಿ ನಾಯಿಗಳ ಹಿಂಡು ಬೆನ್ನಟ್ಟಿದ ಪರಿಣಾಮ ವೇಗವಾಗಿ ಬೈಕ್ ಚಲಾಯಿಸಿದ ಪತ್ರಕರ್ತನೋರ್ವ ಬಿದ್ದು ಗಾಯಗೊಂಡ ಘಟನೆ ಶನಿವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಮಾಂಸ ವ್ಯಾಪಾರಿಗಳು ಪ್ರತಿನಿತ್ಯ ತ್ಯಾಜ್ಯವನ್ನು ಪಟ್ಟಣದ ಹೊರ ವಲಯದ ರಾವೂರ ಮಾರ್ಗದ ರಸ್ತೆ ಬದಯಲ್ಲಿ ಎಸೆಯುತ್ತಿರುವ ಕಾರಣ ರಕ್ತದ ರುಚಿಗಾಗಿ ಬೀದಿನಾಯಿಗಳ ಹಿಂಡು ಹಗಲು ರಾತ್ರಿಯನ್ನದೆ ಕಾಯ್ದು ಕುಳಿತಿರುತ್ತವೆ. ಹೀಗೆ ರಸ್ತೆ ಮಾರ್ಗವಾಗಿ ಹೋಗುವ ಬೈಕ್ ಸವಾರರನ್ನು ಹಿಂಬಾಲಿಸಿ ಕಡಿಯಲು ಪ್ರಯತ್ನಿಸುತ್ತವೆ.
ಶನಿವಾರ ಇದೇ ರಸ್ತೆ ಮೂಲಕ ಹೋಗುತ್ತಿದ್ದ ಪತ್ರಕರ್ತ ಕರುಣೇಶ ಕೆಲ್ಲೂರ ಅವರನ್ನು ನಾಯಿಗಳು ಹಿಂಬಾಲಿಸಿ ಓಡಿ ಬಂದಿವೆ. ರಕ್ತಪಿಪಾಸು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯೋಚಿಸಿದ ಕರುಣೇಶ, ಮತ್ತಷ್ಟು ವೇಗವಾಗಿ ಬೈಕ್ ಓಡಿಸಿದ್ದಾರೆ ಎನ್ನಲಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿದೆ. ಪತ್ರಕರ್ತ ನೆಲಕ್ಕೆ ಬಿದ್ದು ಕೈ ಕಾಲುಗಳಿಗೆ ಗಂಭೀರ ಗಾಯವಾದರೆ, ಬೈಕ್ ಮುಂಭಾಗ ಜಖಂಗೊಂಡಿದೆ. ಸ್ಥಳೀಯರ ನೆರವಿನಿಂದ ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ ನಂದು.. ಇಲ್ಲಿ ಯಾರೇ ಬರಬೇಕಾದರೂ ನನ್ನ ಪರ್ಮಿಷನ್ ಪಡೆದೇ ಬರಬೇಕು. . . !
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ವಾರದ ಹಿಂದಷ್ಟೇ ಉದಯವಾಣಿ ವಿಶೇಷ ವರದಿ ಪ್ರಕಟಿಸಿ ಪುರಸಭೆ ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಲು ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಪತ್ರಕರ್ತನೋರ್ವ ಬೀದಿ ನಾಯಿಗಳ ದಾಳಿಗೆ ಹೆದರಿ ಗಾಯಗೊಂಡು ಪ್ರಾಣಾಪಾಯ ಎದುರಿಸುವಂತಾಗಿದೆ. ಸಾರ್ವಜನಿಕರು, ಶಾಲಾ ಮಕ್ಕಳು ನಾಯಿಗಳ ದಾಳಿಗೆ ತುತ್ತಾಗುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂದು ಜನರು ಒತ್ತಾಯಿಸಿದ್ದಾರೆ.