Advertisement

ವಾಡಿ: ಸರಕಾರಿ ಕಾಲೇಜಿಗಾಗಿ 22ರಿಂದ ಸಹಿ ಸಂಗ್ರಹ ಚಳವಳಿ

09:51 AM Feb 17, 2018 | Team Udayavani |

ವಾಡಿ: ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ (ಎಐಡಿಎಸ್‌ಒ) ಹಾಗೂ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂಥ್‌ ಆರ್ಗನೈಜೇಶನ್‌ (ಎಐಡಿವೈಒ) ಸಂಘಟನೆಗಳ ವತಿಯಿಂದ ಫೆ.22ರಿಂದ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗುತ್ತಿದೆ ಎಂದು ಎಐಡಿಎಸ್‌ಒ ಅಧ್ಯಕ್ಷ ಶರಣು ಹೇರೂರ ತಿಳಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಡಿ ಪಟ್ಟಣ ಸೇರಿದಂತೆ ಇಂಗಳಗಿ, ಕೊಲ್ಲೂರ, ರಾವೂರ, ಲಾಡ್ಲಾಪುರ, ನಾಲವಾರ ಗ್ರಾಮಗಳಲ್ಲಿ ಒಟ್ಟು 15 ಪ್ರೌಢಶಾಲೆಗಳಿವೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಈ ಭಾಗದಲ್ಲಿ ಸರಕಾರಿ ಕಾಲೇಜಿನ ಸೌಲಭ್ಯವಿಲ್ಲ. ಕಳೆದ ಹಲವು ವರ್ಷಗಳಿಂದ ಈ ಭಾಗದ ಬಡ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಕೂಗು ಶಿಕ್ಷಣ ಇಲಾಖೆಗೆ ಕೇಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಳೆದ ಒಂದು ದಶಕದಿಂದ ಎಐಡಿಎಸ್‌ಒ ಹಾಗೂ ಎಐಡಿವೈಒ ಕಾಲೇಜಿಗಾಗಿ ಹೋರಾಟ ನಡೆಸುತ್ತ ಬರುತ್ತಿವೆ. ಹಲವು ಹಂತದ ಚಳವಳಿ ಸಂಘಟಿಸಿ ಸರಕಾರ ಮತ್ತು ಶಾಸಕ, ಸಚಿವರ ಗಮನ ಸೆಳೆಯಲಾಗಿದೆ. ಆದರೂ ವಾಡಿ ಪಟ್ಟಣಕ್ಕೆ ಕಾಲೇಜು ಮಂಜೂರಾಗಿಲ್ಲ. ನಿತ್ಯ ನೂರಾರು ವಿದ್ಯಾರ್ಥಿಗಳು ದೂರದ ನಗರ ಪ್ರದೇಶಗಳಿಗೆ ಕಾಲೇಜು ಶಿಕ್ಷಣಕ್ಕಾಗಿ ರೈಲು ಪ್ರಯಾಣದ ಮೊರೆ ಹೋಗಿದ್ದಾರೆ. 

ಕಾಲೇಜು ಸ್ಥಾಪಿಸಲು ಎಲ್ಲ ರೀತಿಯ ಅನುಕೂಲತೆಯಿದ್ದರೂ ವಾಡಿ ಪಟ್ಟಣಕ್ಕೆ ಕಾಲೇಜು ಮಂಜೂರು ಮಾಡುವಲ್ಲಿ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೂ ವಿದ್ಯಾರ್ಥಿಗಳ ಕಷ್ಟ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಸಂಘಟನೆಗಳ ಮನವಿ ಸ್ವೀಕರಿಸಲೂ ಸಚಿವರಿಗೆ ಕಷ್ಟವಾಗುತ್ತಿದೆ ಎಂದು ದೂರಿದರು.

ಹೋರಾಟದ ಮುಂದು ವರೆದ ಭಾಗವಾಗಿ ಫೆ.22ರಿಂದ ವಾಡಿಯಲ್ಲಿ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗುತ್ತಿದೆ. ಮಾ.1ರಂದು ಎರಡನೇ ಹಂತದ ಸಹಿ ಸಂಗ್ರಹ ನಡೆಯಲಿದೆ. ಮಾರ್ಚ್‌ ಮೊದಲ ವಾರದಲ್ಲಿ ಶಿಕ್ಷಣ ಇಲಾಖೆ ಪ್ರತಿಕೃತಿ ದಹಿಸಲಾಗುವುದು. ವಾಡಿಗೆ ಸರಕಾರಿ ಕಾಲೇಜು ಮಂಜೂರು ಮಾಡುವವರೆಗೆ ನಿರಂತರವಾಗಿ ಉಗ್ರ ಹೋರಾಟ ರೂಪಿಸಲು ತೀರ್ಮನಿಸಲಾಗಿದೆ ಎಂದು ವಿವರಿಸಿದರು.

ಎಐಡಿವೈಒ ಕಾರ್ಯದರ್ಶಿ ಶರಣು ವಿ.ಕೆ, ಉಪಾಧ್ಯಕ್ಷ ರಾಜು ಒಡೆಯರ, ಎಐಡಿಎಸ್‌ಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ, ಶ್ರೀಶರಣ ಹೊಸಮನಿ ಸುದ್ದಿಗೋಷ್ಠಿಯಲ್ಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next