ವಾಡಿ: ಅಡವಿಯಲ್ಲಿ ತಿರುಗುತ್ತ ಅನ್ನಕ್ಕಾಗಿ ಅಲೆಯುತ್ತಿದ್ದ ಅಲೆಮಾರಿ ಬಂಜಾರಾ ಜನಾಂಗದ ಬದುಕು ಅರಳಲು ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಮತ್ತು ಸಂತ ಶ್ರೀ ಸೇವಾಲಾಲ ಮಹಾರಾಜರ ಹೋರಾಟ ಕಾರಣವಾಗಿದೆ ಎಂದು ಮಾಜಿ ಶಾಸಕ, ಬಂಜಾರಾ ಸಮಾಜದ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು.
ಬಂಜಾರಾ ಸಮುದಾಯದ ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ 281ನೇ ಜಯಂತಿ ನಿಮಿತ್ತ ರವಿವಾರ ಪಟ್ಟಣದ ಸೇವಾಲಾಲ ನಗರದ ಸೇವಾಲಾಲ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಲಂಬಾಣಿ ಯುವತಿಯರ ಮದುವೆ ಎಂದರೆ ವರನಿಗೆ ಮಗಳನ್ನು ಮಾರಿಕೊಂಡಂತೆ. ಅಲೆಮಾರಿ ಜೀವನದ ಬೆನ್ನಟ್ಟಿ ಭೂಮಿ ಸುತ್ತುವ ಈ ಜನಾಂಗದ ಬಂಧುಗಳು ಕಣ್ಣಿಗೆ ಬೀಳುವುದು ಅದ್ಯಾವೂದೋ ಊರಿನ ಸಂತೆ ಅಥವಾ ಜಾತ್ರೆಗಳಲ್ಲಿ ಮಾತ್ರ. ಪರಸ್ಪರ ಭೇಟಿಯಾದಾಗ ಎದೆಗಪ್ಪಿಸಿಕೊಂಡು ಗೊಳ್ಳೋ ಎಂದು ಅಳುತ್ತಿದ್ದರು. ಇಂತಹ ಹೀನಾಯ ಬದುಕಿನ ಹಿನ್ನೆಲೆ ಹೊಂದಿರುವ ಬಂಜಾರಾ ಸಮುದಾಯಕ್ಕೆ ಬಾಬಾಸಾಹೇಬರು ಮೀಸಲಾತಿ ಒದಗಿಸಿ ಬೆಳಕು ನೀಡಿದ್ದಾರೆ. ಸಂತ ಸೇವಾಲಾಲ ಮಹಾರಾಜರು ಮಾರ್ಗದರ್ಶನ ನೀಡಿ ಕಷ್ಟಗಳನ್ನು ದೂರ ಮಾಡಿದ್ದಾರೆ. ಅಂತಹ ಮಹಾನ್ ಸಂತನ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ ಮಾತನಾಡಿ, ಪ್ರತಿ ವರ್ಷದ ಫೆಬ್ರವರಿ ತಿಂಗಳ 14 ಮತ್ತು 15ರಂದು ದೇಶದ ಎಲ್ಲೆಡೆ ಏಕಕಾಲಕ್ಕೆ ಸೇವಾಲಾಲ ಮಹಾರಾಜರ ಜಯಂತಿ ನಡೆಯುತ್ತದೆ. ಈ ದಿನಗಳಲ್ಲಿ ಲಂಬಾಣಿಗರ ತಾಂಡಾಗಳಲ್ಲಿ ಹಬ್ಬದ ವಾತಾವರಣ ಇರುತ್ತದೆ ಎಂದರು.
ಫೆ.15ರಂದು ನಗರದಲ್ಲಿ ಮುಗುಳನಾಗಾಂವ ಶ್ರೀಯಲ್ಲಾಲಿಂಗ ಪುಣ್ಯಾಶ್ರಮದ ಪೂಜ್ಯ ಜೇಮಸಿಂಗ್ ಮಹಾರಾಜ, ಗೊಬ್ಬೂರ ಮಠದ ಶ್ರೀ ಬಳಿರಾಮ ಮಹಾರಾಜರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ, ಬೃಹತ್ ಬಹಿರಂಗ ಸಭೆ, ಉಚಿತ ಸಾಮೂಹಿಕ ವಿವಾಹ, ಪ್ರತಿಭಾವಂತ ಬಂಜಾರಾ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಸಮಾಜದ ಹಿರಿಯ ಮುಖಂಡರಾದ ರಮೇಶ ಕಾರಬಾರಿ, ದೇವಜಿ ನಾಯಕ, ಮೋತಿರಾಮ ರಾಠೊಡ, ರಾಮಚಂದ್ರ ರಾಠೊಡ, ಸೋಮಸಿಂಗ್ ರಾಠೊಡ, ಗಣೇಶ ಚವ್ಹಾಣ, ತುಕಾರಾಮ ರಾಠೊಡ, ರಾಮು ರಾಠೊಡ, ರಾಜು ಪವಾರ, ಈಶ್ವರ ರಾಠೊಡ, ಕಿಶನ್ ಜಾಧವ, ನಾಮದೇವ ಚವ್ಹಾಣ, ಅಂಬಾದಾಸ ಜಾಧವ, ಬೋರು ರಾಠೊಡ ಯಾಗಾಪುರ, ದಿನೇಶ ಗೋಪಾಲ ರಾಠೊಡ, ಧರಮ ಪವಾರ, ಪಾಂಡು ರಾಠೊಡ, ದೇವು ಜಾಧವ ಪಾಲ್ಗೊಂಡಿದ್ದರು.