ರಬಕವಿ-ಬನಹಟ್ಟಿ: ಇದೇ 18 ರಂದು ಬೆಳಗ್ಗೆ 11.30ಕ್ಕೆ ನಡೆಯುವ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರೈತ ನಾಗಪ್ಪ ಗಣಿಯವರ ಎಂಬವರ ಜಮೀನಿನ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಬೇಕು ಮತ್ತು ಅವರು ತಮ್ಮ ಸಾಲವನ್ನು ತುಂಬುವ ನಿಟ್ಟಿನಲ್ಲಿ ಒನ್ ಟೈಮ್ ಸೆಟಲಮೆಂಟಗೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ಅವಕಾಶ ನೀಡಬೇಕು. ಇಲ್ಲದಿದ್ದರೆ ಬ್ಯಾಂಕ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಅನಿರ್ಧಿಷ್ಠಾವಧಿ ಮುಷ್ಕರವನ್ನು ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮತ್ತು ರೈತ ಸಂಘಟನೆಯ ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದರು.
ಗುರುವಾರ ಅವರು ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದರು.
ರೈತರ ಸಾಲಕ್ಕಾಗಿ ಭೂಮಿಯನ್ನು ಹರಾಜು ಮಾಡುವ ಪ್ರಕ್ರಿಯ ಎಲ್ಲೂ ನಡೆದಿಲ್ಲ. ರೈತರು ಬಹಳಷ್ಟು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ರೈತರ ಸಾಲಕ್ಕಾಗಿ ಅವರ ಜಮೀನನ್ನು ಹರಾಜು ಮಾಡಬಾರದು ಎಂದು ಸರ್ಕಾರವೇ ತಿಳಿಸಿರುವಾಗಿ ಬ್ಯಾಂಕ್ ಆಫ್ ಬರೋಡಾದ ಹರಾಜು ಪ್ರಕ್ರಿಯೆ ಖಂಡನೀಯವಾದುದು. ರಾಜ್ಯ ರೈತರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅಧಿಕಾರಿಗಳು ಹರಾಜು ಪ್ರಕ್ರಿಯೆ ನಿಲ್ಲಿಸಿ ರೈತನಿಗೆ ಒಂದೇ ಕಂತಿನಲ್ಲಿ ಹಣ ತುಂಬಲು ಅವಕಾಶ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ರೈತ ಸಂಘವು ಇನ್ನಷ್ಟು ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುತ್ತಪ್ಪ ಗಣಿ ಮಾತನಾಡಿ, ನಮ್ಮ ಸಹೋದರ ನಾಗಪ್ಪ ಗಣಿ 2008 ರಲ್ಲಿ ಬನಹಟ್ಟಿಯ ವಿಜಯಾ ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದರು. ಬೆಳೆ ಹಾನಿ ಹಾಗೂ ವಿವಿಧ ಕಾರಣಗಳಿಂದಾಗಿ ಬ್ಯಾಂಕಿನ ಸಾಲದ ಹಣ ತುಂಬಲಾಗಲಿಲ್ಲ. ಮಧ್ಯದಲ್ಲಿ ಹಣ ತುಂಬಲು ಬ್ಯಾಂಕ್ ಗೆ ಹೋದರೆ ಅಧಿಕಾರಿಗಳು ತಮ್ಮ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಿಯೇ ಮುಗಿಸಿಕೊಳ್ಳಲು ತಿಳಿಸಿದರು. ಈಗ ಅಂದಾಜು ರೂ. 32 ಲಕ್ಷದಷ್ಟು ಹಣವನ್ನು ತುಂಬಲು ಆದೇಶ ಮಾಡಿದ್ದು, ಇದೇ 18 ರಂದು ಹರಾಜು ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ನಡೆಸುತ್ತಿದ್ದಾರೆ. ಜಮೀನು ಹರಾಜುಗೊಂಡರೆ ನಮಗೆ ಯಾವುದೆ ಕೆಲಸವಿಲ್ಲದಂತಾಗುತ್ತದೆ. ಇದು ರೈತರಿಗೆ ವಿಷ ನೀಡುವ ಕಾರ್ಯವನ್ನು ಬ್ಯಾಂಕ್ ನವರು ಮಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ನಮಗೆ ಸಹಕರಿಸಿದರೆ ನಾವು ಒನ್ ಟೈಮ್ ಸೆಟಲಮೆಂಟ್ನಲ್ಲಿ ಮುಗಿಸಿಕೊಳ್ಳಲು ಬದ್ಧರಾಗಿದ್ದೇವೆ.
ಇದನ್ನೂ ಓದಿ : ಔರಾದ್ ನಲ್ಲಿ 90 ಕೋಟಿ ವೆಚ್ಚದಲ್ಲಿ ಸಿಪೆಟ್ ಕೇಂದ್ರ ಆರಂಭ : ಸಚಿವ ಪ್ರಭು ಚವ್ಹಾಣ್
ಇದೇ ಅವಧಿಯಲ್ಲಿ ಸಾಲ ಪಡೆದುಕೊಂಡ ಅನೇಕ ಸಾಲಗಾರ ರೈತರು ಇದ್ದಾರೆ. ಆದರೆ ಅವರ ಮೇಲೆ ಯಾವುದೆ ರೀತಿಯ ಕ್ರಮ ತೆಗೆದುಕೊಳ್ಳಲಾರದೆ ದುರುದ್ದೇಶ ಪೂರ್ವಕವಾಗಿ ನಾಗಪ್ಪ ಗಣಿಯವರ ಜಮೀನನ್ನು ಹರಾಜು ಮಾಡುತ್ತಿದ್ದಾರೆ ಎಂದು ಮುತ್ತಪ್ಪ ಗಣಿ ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮುತ್ತಪ್ಪ ಕೋಮಾರ ದೂರಾವಣಿಯ ಮೂಲಕ ಬ್ಯಾಂಕ್ ನ ವಿಭಾಗೀಯ ಅಧಿಕಾರಿಗಳ ಜೊತೆಗೆ ನಡೆಸಿದ ಮಾತುಕತೆ ಕೂಡಾ ಪ್ರಯೋಜಕ್ಕೆ ಬರಲಿಲ್ಲ. ಈ ಕುರಿತು ಇದೇ 13 ರಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಕುರಿತು ಪತ್ರಿಕೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಹೋದಾಗ ಬ್ಯಾಂಕ್ ವ್ಯವಸ್ಥಾಪಕರು ರಜೆಯ ಮೇಲೆ ಇರುವುದರಿಂದ ಯಾವುದೆ ರೀತಿಯ ಪ್ರತಿಕ್ರಿಯೆ ದೊರೆಯಲಿಲ್ಲ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಭೀಮಶಿ ಕರಿಗೌಡರ, ಈರಪ್ಪ ಹಂಚಿನಾಳ, ಸಂಗಪ್ಪ ನಾಗರೆಡ್ಡಿ, ಸುರೇಶ ಚಿಂಚಲಿ, ಶಿವಪ್ಪ ಹೋಟಕರ ಸೇರಿದಂತೆ ಅನೇಕ ರೈತರು ಇದ್ದರು.