ವಾಡಿ: ಕೀಟನಾಶಕ ತೈಲ ಉಸಿರಿನಲ್ಲಿ ಸೇರಿ ನಾಲ್ವರು ಕೃಷಿ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ಆರ್.ಬಿ.ನಗರ ತಾಂಡಾ ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರ್.ಬಿ.ನಗರ ತಾಂಡಾ ನಿವಾಸಿಗಳಾದ ಸುನೀಲ ಗೋಪಾಲ ಜಾಧವ (34), ಅನೀಲ ಗೋಪಾಲ ಜಾಧವ (21), ಕುಮಾರ ಜಾಧವ (22), ಖೇಮು ರಾಠೋಡ (31) ಅಸ್ವಸ್ಥಗೊಂಡ ರೈತರು. ಇವರೆಲ್ಲರೂ ಒಂದೇ ಹೊಲದಲ್ಲಿ ಹತ್ತಿ ಬೆಳೆಗೆ ಕ್ರಿಮಿನಾಶಕ ತೈಲ ಸಿಂಪರಣೆ ಮಾಡುತ್ತಿದ್ದರೂ ಎನ್ನಲಾಗಿದ್ದು, ಏಕಕಾಲಕ್ಕೆ ನಾಲ್ವರೂ ಸಹ ಅಸ್ವಸ್ಥಗೊಂಡು ಬಿದ್ದಿದ್ದಾರೆ.
ಸ್ಥಳದಲ್ಲಿದ್ದವರು ತತ್ ಕ್ಷಣ ರಕ್ಷಣೆಗೆ ಮುಂದಾಗಿ ಖಾಸಗಿ ವಾಹನದ ಮೂಲಕ ಕಲಬುರಗಿ ಜೀವನ ಜ್ಯೋತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲ್ವರ ಆರೋಗ್ಯ ತೀರಾ ಹದಗೆಟ್ಟಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಕೃಷಿ ಕಾಯಕದಲ್ಲಿ ತೊಡಗಿದ್ದ ನಾಲ್ಕೂ ಜನ ಯುವಕರಾಗಿದ್ದು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ತಮ್ಮ ಸ್ವಂತ ಹೊಲದಲ್ಲಿ ಬೆಳೆಗೆ ಎಣ್ಣೆ ಹೊಡೆಯುವಾಗ ಈ ಪ್ರಾಣಾಪಾಯಕಾರಿ ದುರಂತ ಸಂಭವಿಸಿದೆ. ಇವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಳಕರ್ಟಿ ಗ್ರಾಪಂ ಮಾಜಿ ಉಪಾಧ್ಯಕ್ಷ, ಆರ್.ಬಿ.ನಗರ ತಾಂಡಾದ ಬಂಜಾರಾ ಮುಖಂಡ ಗೋವಿಂದ್ ಜಾಧವ ಪ್ರತಿಕ್ರಿಯಿಸಿದ್ದಾರೆ.
ತಿಂಗಳ ಹಿಂದಷ್ಟೇ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ತರ್ಕಸ್‌ಪೇಟೆ ಗ್ರಾಮದ ರೈತನೋರ್ವ ಕ್ರಿಮಿನಾಶಕ ತೈಲ ಸಿಂಪರಣೆ ಮಾಡುತ್ತಿದ್ದಾಗ ವಿಷಕಾರಿ ತೈಲ ದೇಹ ಸೇರಿದ ಕಾರಣಕ್ಕೆ ಮೃತಪಟ್ಟಿದ್ದರು. ಯಾಗಾಪುರ ಗ್ರಾಪಂ ವ್ಯಾಪ್ತಿಯಲ್ಲೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಕ್ರಿಮಿನಾಶಕ ತೈಲ ಸಿಂಪರಣೆಯಿಂದ ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ಪ್ರಾಣ ಅಪಾಯಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.