ವಾಡಿ: ಕಲಬುರಗಿ ಹಾಗೂ ಗುತ್ತಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ಭೂಸ್ವಾಧೀನ ಆತಂಕದ ಜತೆಗೆ ಪರಿಹಾರ ದರ ಪಾತಾಳಕ್ಕಿಳಿದಿರುವ ಚಿಂತೆ ರೈತರನ್ನು ಕಾಡುತ್ತಿದೆ.
Advertisement
ಜನದಟ್ಟಣೆ ಹಾಗೂ ತಿರುವುಗಳನ್ನು ಗಮನಿಸಿರುವ ಅಧಿಕಾರಿಗಳು, ಲಾಡ್ಲಾಪುರ ಗ್ರಾಮದ ಹೊರ ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 11 ಎಕರೆ ಕೃಷಿ ಭೂಮಿ ಹೆದ್ದಾರಿ ಪಾಲಾಗಲಿದ್ದು, ಭೂಮಿ ಕಳೆದುಕೊಳ್ಳುತ್ತಿರುವ ರೈತರು ಪರಿಹಾರ ನಷ್ಟ ಅನುಭವಿಸುವ ಆತಂಕ ವ್ಯಕ್ತಪಡಿಸಿದ್ದಾರೆ.
Related Articles
Advertisement
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರಕಾರದ ಮಾರುಕಟ್ಟೆ ದರಪಟ್ಟಿಯ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡುವುದಾಗಿ ಹೇಳಿದೆ. ಅಂದರೆ ಎಕರೆಗೆ 16 ಲಕ್ಷ ರೂ. ದರ ಲಭ್ಯವಾಗಬೇಕು. ಕಂದಾಯ ಅಧಿಕಾರಿಗಳ ಸರ್ವೇ ಲೋಪದಿಂದ ಪರಿಹಾರ ಧನ ಪಾತಾಳಕ್ಕೆ ಕುಸಿದಿದ್ದು, ಎಕರೆಗೆ 8 ಲಕ್ಷ ರೂ. ದರದಂತೆ ಬಿಡಿಗಾಸು ಪರಿಹಾರ ನಮ್ಮ ಕೈಗಿಟ್ಟು ಬೀದಿಪಾಲು ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಗ್ರಾಮದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆ ಸರ್ವೇಯಿಂದಾದ ದರ ನಿಗದಿ ಲೋಪ ಸರಿಪಡಿಸಬೇಕು. ನೀರಾವರಿ ಕೃಷಿ ಆಧಾರಿತ ಭೂಮಿಗಳ ಮೌಲ್ಯ ಕಳೆದಿರುವ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹೆದ್ದಾರಿ ಅಭಿವೃದ್ಧಿಗಾಗಿ ಶಾಶ್ವತವಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಕಾನೂನುಬದ್ಧ ಮೌಲ್ಯ ನಿಗದಿಪಡಿಸಬೇಕು. ನಮ್ಮನ್ನು ಬೀದಿಗೆ ತಳ್ಳಿ ರಸ್ತೆ ಅಭಿವೃದ್ಧಿ ಮಾಡುವುದೇ ಆದರೆ ನಮ್ಮ ಶವಗಳ ಮೇಲೆಯೇ ಹೆದ್ದಾರಿ ಹಾಯ್ದು ಹೋಗಲಿ ಎಂದು ರೈತರಾದ ವಿಶ್ವನಾಥ ಸಾಹುಕಾರ, ಮರೆಮ್ಮ ಸಾಬಣ್ಣ ಹಾಗೂ ನಾಗರತ್ನಮ್ಮ ಮಲಕಂಡಿ ತಮ್ಮ ಮನದ ನೋವು ಹೊರಹಾಕಿದ್ದಾರೆ.