ವಾಡಿ: ಪತ್ರಿಕೆಗಳಿಗೆ ಫೋಜು ಕೊಡುವ ಉಮೇಶ ಜಾಧವ ಗೆದ್ದ ಮೇಲೆ ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕೆಬಿಜೆಎನ್‌ಎಲ್ ಯೋಜನೆಯ 10 ಲಕ್ಷ ರೂ. ಅನುದಾನದಡಿ ಚಾಮನೂರ ಗ್ರಾಮದ ಪ.ಜಾ ಬಡಾವಣೆಗೆ ಮಂಜೂರಾದ ಸಮುದಾಯ ಭವನ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವರ್ಗಾವಣೆಗಾಗಿ ಒಂದೊಂದು ರೇಟ್ ನಿಗದಿ ಮಾಡಲಾಗಿದೆ. ಬಿಜೆಪಿಯ ಯಾವ ನಾಯಕರು ಎಲ್ಲೆಲ್ಲಿ ಏನೇನು ದಂಧೆ ನಡೆಸುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಇವರ ರೇಟ್ ಕಾರ್ಡ್ ಸಿದ್ಧಪಡಿಸುವ ಮೂಲಕ ರಾಜಕೀಯ ವೇದಿಕೆಗಳಲ್ಲಿ ಬಣ್ಣ ಬಯಲು ಮಾಡುತ್ತೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಹೈದ್ರಾಬಾದ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ’ ಎಂದು ಹೆಸರು ಬದಲಿಸಿದ್ದೇ ಬಿಜೆಪಿ ಸಾಧನೆಯಾಗಿದೆ. ಈ ಭಾಗದ ಜನರ ಕಲ್ಯಾಣಕ್ಕಾಗಿ ಒಂದೂ ಹೊಸ ಯೋಜನೆಗಳು ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧೆಡೆ ಕಾಮಗಾರಿಗೆ ಚಾಲನೆ: ಶಾಂಪೂರಹಳ್ಳಿ ಗ್ರಾಮದಲ್ಲಿ 49.50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಲಾಡ್ಲಾಪುರ-ಅಳ್ಳೊಳ್ಳಿ ರಸ್ತೆ ಸುಧಾರಣೆಗೆ 1.87 ಕೋಟಿ ರೂ., ಹಳಕರ್ಟಿ ಗ್ರಾಪಂ ವ್ಯಾಪ್ತಿಯ ದೇವಜಿ ತಾಂಡಾದಲ್ಲಿ 49.50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ-ಚರಂಡಿ, ದೇವಾಪುರ ಗ್ರಾಮದಲ್ಲಿ 45 ಲಕ್ಷ ರೂ. ವೆಚ್ಚದ ಬೀದಿ ದೀಪ, ಶಾಲೆಗೆ ಶೌಚಾಲಯ ಹಾಗೂ ಸಿಸಿ ರಸ್ತೆ-ಚರಂಡಿ ಹಾಗೂ 8.75 ಲಕ್ಷ ರೂ. ಅನುದಾನದಲ್ಲಿ ಹಳಕರ್ಟಿ ಗ್ರಾಮದ ಉರ್ದು ಪ್ರಾಥಮಿಕ ಶಾಲೆ ಕೋಣೆಗಳ ನಿರ್ಮಾಣ ಸೇರಿದಂತೆ 3.89 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿದರು.
ಕೆಪಿಸಿಸಿ ಸದಸ್ಯ ಶ್ರೀನಿವಾಸ ಸಗರ, ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಜಿ.ಪಂ ಸದಸ್ಯ ಶಿವುರುದ್ರ ಭೀಣಿ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರಾ.ಪಂ ಅಧ್ಯಕ್ಷೆ ವಿಮಲಾಬಾಯಿ ರಾಠೊಡ, ಉಪಾಧ್ಯಕ್ಷ ಶ್ರೀಮಂತ ಭಾವಿ, ಮುಖಂಡರಾದ ಶರಣಗೌಡ ಚಾಮನೂರ, ಟೋಪಣ್ಣ ಕೋಮಟೆ, ಅಬ್ದುಲ್ ಅಜೀಜ್‌ಸೇಠ, ಶಂಕ್ರಯ್ಯಸ್ವಾಮಿ ಮದರಿ, ಚಂದ್ರಸೇನ ಮೇನಗಾರ, ಸುಭಾಷ ಯಾಮೇರ, ಸೂರ್ಯಕಾಂತ ರದ್ದೇವಾಡಿ, ಇಂದ್ರಜೀತ ಸಿಂಗೆ, ಗುಂಡುಗೌಡ ಇಟಗಿ, ರಸೂಲಸಾಬ ಪಾಲ್ಗೊಂಡಿದ್ದರು. ಗ್ರಾಪಂ ಸದಸ್ಯ ಭಗವಾನ ಎಂಟಮನ್ ನಿರೂಪಿಸಿ, ವಂದಿಸಿದರು.