Advertisement

ಅಪಾಯದಲ್ಲಿದೆ ಕಾಗಿಣಾ ಸೇತುವೆ

11:08 AM Sep 16, 2019 | Team Udayavani |

ಮಡಿವಾಳಪ್ಪ ಹೇರೂರ
ವಾಡಿ:
ಕಾಗಿಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಈಗ ಅಪಾಯದ ಅಂಚಿನಲ್ಲಿದೆ. ವಾಹನಗಳ ನಿರಂತರ ಅಪಘಾತ ಘಟನೆಗಳಿಗೆ ತುತ್ತಾಗಿ ಸೇತುವೆ ಮೇಲಿನ ಸುರಕ್ಷಾ ಕಂಬಗಳು ಪುಡಿಪುಡಿಯಾಗಿವೆ. ಸೇತುವೆಯತ್ತ ಬರುವ ವಾಹನಗಳಿಗೆ ಸ್ವಾಗತ ಕೋರಲು ಹೆಜ್ಜೆ-ಹೆಜ್ಜೆಗೂ ಕಂದಕಗಳು ಸೃಷ್ಟಿಯಾಗಿವೆ. ಇಕ್ಕಟ್ಟಾದ ಸೇತುವೆ ಮೇಲೆ ಹಲವಾತು ದುರ್ಘ‌ಟನೆಗಳಿಗೆ ಸಂಭವಿಸಿವೆ.

Advertisement

ಕಲಬುರಗಿ-ಯಾದಗಿರಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಕೇಂದ್ರ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಇಚ್ಛಾಶಕ್ತಿಯಿಂದ ಸಾರಿಗೆ ಸೌಲಭ್ಯ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಬಸ್‌ ಸಂಚಾರವೇ ಇಲ್ಲವಾಗಿದ್ದ ಈ ರಸ್ತೆಯಲ್ಲೀಗ ಪ್ರತಿ 15 ನಿಮಿಷಕ್ಕೊಂದು ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಪ್ರತಿ ನಿಮಿಷಕ್ಕೊಂದು ಸಿಮೆಂಟ್ ಲಾರಿ ಸಾಗುವುದನ್ನು ಕಾಣಬಹುದಾಗಿದೆ.

ರಸ್ತೆ ಅಭಿವೃದ್ಧಿಯಾಗಿದೆ ಆದರೆ ಶಿಥಿಲ ಸೇತುವೆ ಅಪಾಯ ಆಹ್ವಾನಿಸುತ್ತಿದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ.

ವಾಡಿ ಮತ್ತು ಶಹಾಬಾದ ನಗರಗಳ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕಾಗಿಣಾ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ವಾಡಿ ಎಸಿಸಿ ಕಂಪನಿ, ಚಿತ್ತಾಪುರದ ಒರಿಯಂಟ್ ಸಿಮೆಂಟ್ ಘಟಕ ಹಾಗೂ ಸುಮಾರು 400ಕ್ಕೂ ಹೆಚ್ಚು ಕಲ್ಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಸಿಮೆಂಟ್ ಸೇರಿದಂತೆ ಪರ್ಷಿ ಕಲ್ಲುಗಳು ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಗೂಡ್ಸ್‌ ಲಾರಿಗಳ ಓಡಾಟಕ್ಕೇನು ಲೆಕ್ಕವಿಲ್ಲ. ಭಾರಿ ವಾಹನಗಳ ಭಾರ ತಾಳದೆ ಕಾಗಿಣಾ ಸೇತುವೆ ತನ್ನ ಶಕ್ತಿ ಸಾಮರ್ಥ್ಯ ಕಳೆದುಕೊಂಡಿರುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಭಾರಿ ವಾಹನಗಳ ಡಿಕ್ಕಿಯಿಂದ ಸೇತುವೆ ಮೇಲೆ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಕಾಂಕ್ರಿಟ್ ರಕ್ಷಣಾ ಗೋಡೆಗಳು ಮುರಿದು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಸೇತುವೆ ದಾಟಬೇಕಾದ ಭೀತಿ ಎದುರಾಗಿದೆ.

Advertisement

ಇತ್ತ ಚಿತ್ತ ಹರಿಸುವರೇ ಸಂಸದ ಜಾಧವ
ಗ್ರಾಮೀಣ ರಸ್ತೆಯಂತಿದ್ದ ಹದಗೆಟ್ಟ ಕಲಬುರಗಿ-ಗುತ್ತಿ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಿರುವ ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಿರಿದಾದ, ಯಮಸ್ವರೂಪಿ ಕಾಗಿಣಾ ಸೇತುವೆ ಅಗಲೀಕರಣ ಮಾಡಿಸುವಲ್ಲಿ ಮರೆತಂತೆ ಕಾಣುತ್ತಿದೆ. ಈಗ ಸಂಸದ ಡಾ| ಉಮೇಶ ಜಾಧವ ಕಾಗಿಣಾ ಸೇತುವೆ ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವರೇ ಎಂಬ ಪ್ರಶ್ನೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next