ವಾಡಿ: ಕೊರೊನಾ ಸಂಕಟದಲ್ಲಿ ಸಿಲುಕಿ ಕೂಲಿಯಿಲ್ಲದೆ ನರಳುತ್ತಿರುವ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ಕೆ ಸ್ಥಳೀಯ ಆಡಳಿತಗಳಿಂದ ಚಾಲನೆ ದೊರೆತಿದ್ದು, ಹಸಿದವರನ್ನು ಬಿಟ್ಟು ಹೊಟ್ಟೆ ತುಂಬಿದವರ ಮನೆಗೆ ಡೈರಿ ಪ್ಯಾಕೇಟ್‌ಗಳು ತಲುಪುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಲಾಕ್‌ಡೌನ್ ಅಂತ್ಯದ ವರೆಗೂ ಪುರಸಭೆ ವ್ಯಾಪ್ತಿಯ ಬಡವರು, ನಿರ್ಗತಿಕರು ಹಾಗೂ ಊಟ ವಸತಿಗಾಗಿ ಪರದಾಡುತ್ತಿರುವವರಿಗೆ ನೆರವಾಗಬೇಕು ಎನ್ನುವ ಕಾರಣಕ್ಕೆ ಆಹಾರ ಮತ್ತು ನಂದಿನಿ ಡೈರಿ ಹಾಲನ್ನು ಪ್ರತಿನಿತ್ಯ ಉಚಿತವಾಗಿ ಮನೆ ಮನೆಗೆ ತಂದು ವಿತರಿಸಬೇಕು ಎನ್ನುವ ಆದೇಶ ಸರಕಾರದಿಂದ ಹೊರಬಿದ್ದಿದೆ. ಆದರೆ ವಿತರಣೆಯಲ್ಲಿ ರಾಜಕೀಯ ಸೇರಿಕೆಯಾಗಿದ್ದು, ಸ್ಥಿತಿವಂತರೂ ಹಾಲಿಗೆ, ಊಟಕ್ಕೆ ಕೈಯೊಡ್ಡುತ್ತಿದ್ದಾರೆ.
ಹಸಿದವರ ಮಕ್ಕಳು ಮಾತ್ರ ನಮಗೂ ಹಾಲು ಬರುತ್ತದೆ ಎಂದು ಕಾಯ್ದು ಕುಳಿತು ನಿರಾಸೆ ಅನುಭವಿಸುತ್ತಿದ್ದಾರೆ. ಪೌರಕಾರ್ಮಿಕರು ವಾಹನದಲ್ಲಿ ಸಾಗಿಸುವ ಹಾಲುಗಳತ್ತ ದೃಷ್ಟಿ ನೆಡುತ್ತಿರುವ ಬಡ ಮಕ್ಕಳು, ಹಾಲು ಕೊಡಿ ಎಂದು ಕೈಚಾಚುತ್ತಿದ್ದರೂ ಸಿಬ್ಬಂದಿ ನೋಡಿಯೂ ನೋಡದಂತೆ ಬೇರೆ ಬಡಾವಣೆಗಳಿಗೆ ಹೋಗುತ್ತಿದ್ದಾರೆ. ಪುರಸಭೆಯ ವಾರ್ಡ್ 13ರ ಮಲ್ಲಿಕರ್ಜುನ ದೇವಸ್ಥಾನ ಹಿಂಭಾಗದ ಸಣ್ಣ ಬಡಾವಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಬಡ ಕುಟುಂಬಗಳು ಆಶ್ರಯ ಪಡೆದಿವೆ. ಕಳೆದ ಒಂದು ವಾರದಿಂದ ವಿವಿಧ ಬಡಾವಣೆಗಳಿಗೆ ಹಾಲು ವಿತರಿಸಲಾಗುತ್ತಿದೆ. ಆದರೆ ಈ ಬಡಾವಣೆಯ ಮಕ್ಕಳಿಗೆ ಒಮ್ಮೆಯೂ ಹಾಲು ತಲುಪಿಲ್ಲ. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ, ಮನೆಗಳಲ್ಲಿ ಬಟ್ಟೆ ಒಗೆಯುವ, ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಇಲ್ಲಿ ವಾಸವಿದ್ದಾರೆ.
ಇತರ ಸ್ಲಂ ಬಡಾವಣೆಗಳಲ್ಲೂ ಬಡತನ ಭೀಕರವಾಗಿ ಕಾಡುತ್ತಿದೆ. ಇವೆಲ್ಲ ಕುಟುಂಬಗಳಿಗೆ ಸರಿಯಾಗಿ ಹಾಲು ವಿತರಣೆಯಾಗುತ್ತಿಲ್ಲ ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಸಂಚಾಲಕ ಶರಣು ಎಸ್.ಕೆ ಆರೋಪಿಸಿದ್ದಾರೆ.