Advertisement

ಎಸಿಸಿ ತ್ಯಾಜ್ಯ ಮರುಬಳಕೆ ಘಟಕದಿಂದ ದುರ್ವಾಸನೆ

12:21 PM Feb 15, 2020 | Naveen |

ವಾಡಿ(ಕಲಬುರಗಿ ಜಿಲ್ಲೆ): ಇಲ್ಲಿಯ ಎಸಿಸಿ ಸಿಮೆಂಟ್‌ ಕಾರ್ಖಾನೆಯಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಮರುಬಳಕೆ (ಜಿಯೊಸೈಕಲ್‌) ಘಟಕದಿಂದ ವಿಪರೀತ ದುರ್ವಾಸನೆ ಹರಡುತ್ತಿದ್ದು, ಸ್ಥಳೀಯರು ಉಸಿರಾಟ ತೊಂದರೆಯಿಂದ ಬಳಲುವಂತಾಗಿದೆ.

Advertisement

ದೇಶದ ಇತರ ಕಾರ್ಖಾನೆಗಳ ಅನುಪಯುಕ್ತ ಉತ್ಪನ್ನಗಳ ತ್ಯಾಜ್ಯವನ್ನು ಇಂಧನವನ್ನಾಗಿ ಮರುಬಳಕೆ ಮಾಡುವ ಉದ್ದೇಶದಿಂದ ಎಸಿಸಿ ಆಡಳಿತ ಮಂಡಳಿಯು 2014ರಲ್ಲಿ ಸುಮಾರು 65 ಕೋಟಿ ರೂ. ಖರ್ಚು ಮಾಡಿ ತ್ಯಾಜ್ಯ ಮರುಬಳಕೆ ಘಟಕ ಸ್ಥಾಪಿಸಿದೆ. ದೇಶದ ಇತರ ಏಳು ಕಾರ್ಖಾನೆಗಳ ತ್ಯಾಜ್ಯ ಮರುಬಳಕೆ ಘಟಕಗಳ ಪೈಕಿ ವಾಡಿ ಎಸಿಸಿ ಘಟಕವೂ ಒಂದಾಗಿದೆ.

ಬೆಂಗಳೂರು, ಮೈಸೂರು, ರಾಯಚೂರು, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಒಟ್ಟು 25 ಕಾರ್ಖಾನೆಗಳಿಂದ ಬರುವ ಅವಧಿ ಮುಗಿದ ಉತ್ಪನ್ನಗಳಾದ ಟೂತ್‌ ಪೇಸ್ಟ್‌, ಸಾಬೂನು, ಚಾಕೋಲೆಟ್‌, ಕಾμ ಪುಡಿ, ಹಾರ್ಲಿಕ್ಸ್‌, ಚಹಾಪುಡಿ, ಬಿಸ್ಕತ್‌ ಹಾಗೂ ಜೈವಿಕ ತ್ಯಾಜ್ಯ ಮತ್ತು ನಗರಗಳ ಘನತ್ಯಾಜ್ಯವನ್ನು ಈ ಘಟಕದಲ್ಲಿ ಸುಟ್ಟು ಇಂಧನವನ್ನಾಗಿ ಪರಿವರ್ತಿಸಲಾಗುತ್ತಿದೆ.

ಕಲ್ಲಿದ್ದಲು ಬಳಕೆ ಕಡಿಮೆಗೊಳಿಸಲು ಕಂಪನಿ ಈ ತಂತ್ರಕ್ಕೆ ಮುಂದಾಗಿದ್ದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಸರ ಸ್ನೇಹಿ ಘಟಕವೆಂದು ನಂಬಿಸಿ ಫ್ರೀ ಕೋ ಪ್ರೊಸೆಸಿಂಗ್‌ ಘಟಕವನ್ನು ನಡೆಸಲಾಗುತ್ತಿದೆ. ಆದರೆ ಇದರಿಂದ ಕೆಟ್ಟ ವಾಸನೆ ಹರಡಿ ಜನರ ಆರೋಗ್ಯ ಹದಗೆಡುತ್ತಿದೆ. ಈ ವಿಷಯ ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕಿದ್ದರೂ ಕ್ರಮಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಆಮದು ಸ್ಥಗಿತ: ಈ ನಡುವೆ ಎಸಿಸಿ ಕಾರ್ಖಾನೆಯ ಪರಿಸರ ವಿಭಾಗದ ಮುಖ್ಯಸ್ಥ ರಮೇಶ ಗೌಡಪ್ಪನೋರ ಮಾತನಾಡಿ, ಕಂಪನಿಯಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಮರುಬಳಕೆ ಘಟಕದಲ್ಲಿ ಅವಧಿ ಮುಗಿದ ವಿವಿಧ ಕಂಪನಿಗಳ ಉತ್ಪನ್ನಗಳನ್ನು ದಹನ ಮಾಡುತ್ತಿರುವುದು ನಿಜ. ಈ ವೇಳೆ ದುರ್ವಾಸನೆಯಾಗಿ ಪರಿಸರದಲ್ಲಿ ಸೇರಿಕೊಳ್ಳದಂತೆ ತುಂಬಾ ಎಚ್ಚರ ವಹಿಸಲಾಗುತ್ತಿದೆ.

Advertisement

ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ತಡೆಯಲು ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿದ್ದೇವೆ. ದುರ್ವಾಸನೆಗೆ ಕಾರಣವಾಗುತ್ತಿರುವ ಕೆಲ ಕಂಪನಿಗಳ ಉತ್ಪನ್ನಗಳ ಆಮದು ಸ್ಥಗಿತಗೊಳಿಸಿದ್ದೇವೆ. ಇದರ ನಡುವೆಯೂ ಜನರಿಗೆ ವಾಸನೆ ಬರುತ್ತಿದ್ದರೆ ಪುನಃ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎಸಿಸಿ ತ್ಯಾಜ್ಯ ಮರುಬಳಕೆ ಘಟಕದಿಂದ ದುರ್ವಾಸನೆ ಹಬ್ಬುತ್ತಿರುವ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ. ಪರಿಸರ ಮಾಲಿನ್ಯವಾಗದಂತೆ ತಡೆಯಲು ಎಸಿಸಿ ಕ್ರಮ ಕೈಗೊಳ್ಳದಿದ್ದರೆ ಜನರ ಆರೋಗ್ಯ ಹದಗೆಡುತ್ತದೆ. ಎಸಿಸಿ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವಾಸ್ತವ ಸ್ಥಿತಿಗತಿ ಅರಿತು ಕರ್ನಾಟಕ ಪರಿಸರ ಸಂರಕ್ಷಣಾ ಮಂಡಳಿಗೆ ಪತ್ರ ಬರೆಯಲಾಗುವುದು. ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ ಎಸಿಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಸಂಗಮೇಶ ಕಾರಬಾರಿ,
ಪರಿಸರ ಅಭಿಯಂತರ, ಪುರಸಭೆ, ವಾಡಿ

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next