Advertisement

ವಾಡಿ: ನೀರಿನ ಟ್ಯಾಂಕಿಗೆ ಬಿದ್ದು ನರಳಾಡಿ 30 ಕೋತಿಗಳ ಸಾವು

10:00 PM Dec 16, 2022 | Team Udayavani |

ವಾಡಿ: ಬಳಕೆಯಲ್ಲಿಲ್ಲದ ಶಿಥಿಲ ನೀರಿನ ಟ್ಯಾಂಕ್‌ಗೆ ಬಿದ್ದ ನಲವತ್ತಕ್ಕೂ ಹೆಚ್ಚು ಕೋತಿಗಳಲ್ಲಿ ಸುಮಾರು ಮೂವತ್ತು ಕೋತಿಗಳು ನರಳಿ ನರಳಿ ಮೃತಪಟ್ಟ ಘಟನೆ ಚಿತ್ತಾಪೂರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಸಂಭವಿಸಿದೆ. ಕೋತಿಗಳ ಸಾಮೂಹಿಕ ಸಾವಿನಿಂದ ದುರ್ವಾಸನೆ ಹಬ್ಬಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

Advertisement

ಗ್ರಾಪಂ ಕೇಂದ್ರ ಸ್ಥಾನವಾಗಿರುವ ಹಳಕರ್ಟಿ ಗ್ರಾಮದಲ್ಲಿರುವ ಶಿಥಿಲ ನೀರಿನ ಟ್ಯಾಂಕ್ (ಓವರ್ ಹೆಡ್ ಟ್ಯಾಂಕ್) ಬೀಳುವ ಹಂತಕ್ಕೆ ತಲುಪಿದ್ದರ ಪರಿಣಾಮ ಕಳೆದ ಐದಾರು ವರ್ಷಗಳಿಂದ ನೀರು ಸಂಗ್ರಹ ಕೈಬಿಡಲಾಗಿದೆ. ಕಳೆದ ನಾಲ್ಕಾರು ದಿನಗಳ ಹಿಂದೆ ನೀರು ಕುಡಿಯಲು ಹೋಗಿ ಸುಮಾರು ಕೋತಿಗಳು ಪ್ರಾಣ ಕಳೆದುಕೊಂಡಿವೆ.

ಹಬ್ಬಿದ ದುರ್ವಾಸನೆ ಮತ್ತು ಮರದ ಮೇಲೆ ಕೋತಿಗಳ ಪರದಾಟ ಕಂಡು ಗ್ರಾಮಸ್ಥರು ಟ್ಯಾಂಕ್ ಪರಿಶೀಲಿಸಿದಾಗ ಕೋತಿಗಳು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಯುವಕರು ಹಗ್ಗ ಇಳಿಬಿಟ್ಟು ಕೆಲವು ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ನೀರು ಆಹಾರವಿಲ್ಲದೆ ಐದಾರು ದಿನಗಳ ಕಾಲ ಟ್ಯಾಂಕಿನಲ್ಲೇ ನರಳಾಡಿದ್ದ ಕೋತಿಗಳು ಪ್ರಾಣಬಿಟ್ಟಿವೆ.

ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ: ಜನ ವಸತಿ ಜಾಗದಲ್ಲಿರುವ ಈ ಟ್ಯಾಂಕ್ ನೆಲಕ್ಕುರುಳಿ ಪ್ರಾಣಾಪಾಯ ತಂದಿಡುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡಬೇಕು ಎಂಬುದು ಗ್ರಾಮಸ್ಥರ ಕೂಗಾಗಿದೆ. ಕೋತಿಗಳು ಬಿದ್ದು ಸತ್ತರೂ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶ ಕಾರಣವಾಗಿದೆ.

ದುರಂತರವೆಂದರೆ ಗ್ರಾಮದ ಖಾಸಗಿ ಶಾಲೆಯೊಂದರ ಅಂಗಳದಲ್ಲಿದ್ದ ಇಂತಹದ್ದೇ ಇನ್ನೊಂದು ಓವರ್ ಹೆಡ್ ಟ್ಯಾಂಕ್ ನಾಲ್ಕು ವರ್ಷಗಳ ಹಿಂದೆ ಧರೆಗುರುಳಿತ್ತು. ಅದೃಷ್ಟವಶಾತ್ ಅಂದು ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಮತ್ತೊಂದು ಟ್ಯಾಂಕ್ ಬೀಳುವ ಹಂತಕ್ಕೆ ತಲುಪಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

Advertisement

ಗ್ರಾಪಂ ಕಚೇರಿ ಮುಂದೆ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸ್ವತಹ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಅವರು ಬಂದು ಗ್ರಾಮದಲ್ಲಿ ಸಂಚರಿಸಿ ಪರಸ್ಥಿತಿ ಕಣ್ಣಾರೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದ ಮುಖಂಡರಾದ ಗೌತಮ ಪರತೂರಕರ, ಹೇಮಂತ ವಾಕೋಡೆ, ಚೌಡಪ್ಪ ಗಂಜಿ, ಮಹಾಂತೇಶ ಹುಳಗೋಳ, ಶರಣು ಪಾಣೆಗಾಂವ, ದತ್ತಾತ್ರೇಯ ಹುಡೇಕರ ಹಾಗೂ ಈರಣ್ಣ ಇಸಬಾ ದೂರಿದ್ದಾರೆ. ಪರಿಣಾಮ ಇಂದು ಈ ಟ್ಯಾಂಕಿನಲ್ಲಿ ಮೂವತ್ತರಿಂದ ನಲವತ್ತು ಕೋತಿಗಳು ಬಿದ್ದು ಹೊರ ಬರಲಾಗದೆ ಉಸಿರುಗಟ್ಟಿ ಸತ್ತಿವೆ.

ಗ್ರಾಮದಲ್ಲಿ ದುರ್ವಾಸನೆ ಹರಡಿದೆ. ಸಾಂಕ್ರಾಮಿಕ ರೋಗ ಹರಡುವ ಆತಂಕ ಉಂಟಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲ ಟ್ಯಾಂಕ್ ತೆರವು ಮಾಡಲು ಮುಂದಾಗಬೇಕು. ಇದಕ್ಕೂ ಮೊದಲು ಮೃತಪಟ್ಟ ಕೋತಿಗಳನ್ನು ಹೊರ ತೆಗೆದು ಔಷಧ ಸಿಂಪಡಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next