Advertisement

ವೇಡ್‌ ಶತಕ; ಆಸ್ಟ್ರೇಲಿಯ ಜಯ

03:45 AM Jan 14, 2017 | |

ಬ್ರಿಸ್ಬೇನ್‌: ಪ್ರವಾಸಿ ಪಾಕಿಸ್ಥಾನ ವಿರುದ್ಧ ಏಕದಿನದಲ್ಲೂ ಪ್ರಾಬಲ್ಯ ಸಾಧಿಸಿದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ, ಶುಕ್ರವಾರ ನಡೆದ ಬ್ರಿಸ್ಬೇನ್‌ ಡೇ-ನೈಟ್‌ ಪಂದ್ಯವನ್ನು 92 ರನ್ನುಗಳಿಂದ ಜಯಿಸಿದೆ. 

Advertisement

5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೀಪರ್‌ ಮ್ಯಾಥ್ಯೂ ವೇಡ್‌ ಅವರ ಚೊಚ್ಚಲ ಶತಕ ಕಾಂಗರೂ ಸರದಿಯ ಆಕರ್ಷಣೆಯಾಗಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯ ಆರಂಭಿಕ ಕುಸಿತಕ್ಕೆ ಸಿಲುಕಿದರೂ ವೇಡ್‌-ಮ್ಯಾಕ್ಸ್‌ವೆಲ್‌ ಜೋಡಿಯ ದಿಟ್ಟ ಹೋರಾಟದಿಂದ 9 ವಿಕೆಟಿಗೆ 268 ರನ್‌ ಪೇರಿಸಿತು. ಜವಾಬಿತ್ತ ಪಾಕಿಸ್ಥಾನ 42.4 ಓವರ್‌ಗಳಲ್ಲಿ 176ಕ್ಕೆ ಆಲೌಟ್‌ ಆಯಿತು. ಇದು ತವರಿನಲ್ಲಿ ಪಾಕ್‌ ವಿರುದ್ಧ ಆಸೀಸ್‌ ಸಾಧಿಸಿದ ಸತತ 9ನೇ ಗೆಲುವು.

ಮ್ಯಾಕ್ಸ್‌ವೆಲ್‌-ವೇಡ್‌ ಆಧಾರ
78 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಕ್ಕೆ ಮ್ಯಾಕ್ಸ್‌ವೆಲ್‌-ವೇಡ್‌ ಆಧಾರವಾದರು. ಇಬ್ಬರೂ ರಕ್ಷಣಾತ್ಮಕ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ಇನ್ನಿಂಗ್ಸ್‌ ಬೆಳೆಸತೊಡಗಿದರು. ಇವರಿಂದ 6ನೇ ವಿಕೆಟಿಗೆ 82 ರನ್‌ ಒಟ್ಟುಗೂಡಿತು.

ಆಸೀಸ್‌ ಸರದಿಯ ಕಟ್ಟಕಡೆಯ ಎಸೆತದಲ್ಲಿ ಒಂಟಿ ರನ್‌ ಗಳಿಸುವ ಮೂಲಕ ವೇಡ್‌ ಚೊಚ್ಚಲ ಶತಕ ಸಂಭ್ರಮ ಆಚರಿಸಿದರು. ಇದು ಅವರ 83ನೇ ಏಕದಿನ ಪಂದ್ಯ. ಈ ಸಾಧನೆಯೊಂದಿಗೆ ಅವರು “ಗಾಬಾ’ದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯದ ಕೇವಲ 2ನೇ ಕೀಪರ್‌ ಎನಿಸಿದರು. ಆ್ಯಡಂ ಗಿಲ್‌ಕ್ರಿಸ್ಟ್‌ ಮೊದಲಿಗ. ಸರಿಯಾಗಿ 100 ಎಸೆತ ಎದುರಿಸಿದ ವೇಡ್‌ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 100 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಮ್ಯಾಕ್ಸ್‌ವೆಲ್‌ ಕೊಡುಗೆ 56 ಎಸೆತಗಳಿಂದ 60 ರನ್‌. ಇದರಲ್ಲಿ 7 ಬೌಂಡರಿ ಸೇರಿತ್ತು.
ಇವರಿಬ್ಬರನ್ನು ಹೊರತುಪಡಿಸಿದರೆ 39 ರನ್‌ ಮಾಡಿದ ಟ್ರ್ಯಾವಿಸ್‌ ಹೆಡ್‌ ಅವರದೇ ಹೆಚ್ಚಿನ ಗಳಿಕೆ. ಹೆಡ್‌ ಆರಂಭಿಕನಾಗಿ ಬ್ಯಾಟ್‌ ಹಿಡಿದು ಬಂದಿದ್ದರು. ವಾರ್ನರ್‌ (7), ಮಿಚೆಲ್‌ ಮಾರ್ಷ್‌ (4), ಲಿನ್‌ (16) ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರೆ, ನಾಯಕ ಸ್ಮಿತ್‌ ಸೊನ್ನೆ ಸುತ್ತಿದರು. ಕಾಂಗರೂ ಸರದಿ ವೇಳೆ ಪಾಕಿಸ್ಥಾನದ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಕೂಡ ಗಮನ ಸೆಳೆಯುವ ಪ್ರದರ್ಶನ ನೀಡಿ 6 ಕ್ಯಾಚ್‌ ಪಡೆದರು.

Advertisement

ಫಾಕ್ನರ್‌, ಕಮಿನ್ಸ್‌ ಆಕ್ರಮಣ
ಪಾಕಿಸ್ಥಾನ ನಿಧಾನ ಗತಿಯ ಆರಂಭ ಕಂಡುಕೊಂಡು 9ನೇ ಓವರಿನಿಂದ ಕುಸಿತ ಕಾಣುತ್ತ ಹೋಯಿತು. ಇದಕ್ಕೆ ಯಾರಿಂದಲೂ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಪಾಕ್‌ ಬ್ಯಾಟಿಂಗ್‌ ಎಷ್ಟೊಂದು ಕಳಪೆಯಾಗಿತ್ತೆಂದರೆ, ಅವರ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. 33 ರನ್‌ ಮಾಡಿದ ಬಾಬರ್‌ ಆಜಂ ಅವರೇ ಟಾಪ್‌ ಸ್ಕೋರರ್‌.
ಆಸ್ಟ್ರೇಲಿಯ ಪರ ಫಾಕ್ನರ್‌ 4, ಕಮಿನ್ಸ್‌ 3, ಸ್ಟಾರ್ಕ್‌ 2 ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-9 ವಿಕೆಟಿಗೆ 268 (ವೇಡ್‌ ಔಟಾಗದೆ 100, ಮ್ಯಾಕ್ಸ್‌ವೆಲ್‌ 60, ಹೆಡ್‌ 39, ಹಸನ್‌ ಅಲಿ 65ಕ್ಕೆ 3, ಇಮಾದ್‌ 35ಕ್ಕೆ 2, ಆಮಿರ್‌ 54ಕ್ಕೆ 2). ಪಾಕಿಸ್ಥಾನ-42.4 ಓವರ್‌ಗಳಲ್ಲಿ ಆಲೌಟ್‌ 176 (ಆಜಂ 33, ಇಮಾದ್‌ 29, ಅಲಿ 24, ಫಾಕ್ನರ್‌ 32ಕ್ಕೆ 4, ಕಮಿನ್ಸ್‌ 33ಕ್ಕೆ 3, ಸ್ಟಾರ್ಕ್‌ 34ಕ್ಕೆ 2). ಪಂದ್ಯಶ್ರೇಷ್ಠ: ಮ್ಯಾಥ್ಯೂ ವೇಡ್‌.

2ನೇ ಪಂದ್ಯ ರವಿವಾರ ಮೆಲ್ಬರ್ನ್ ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next