ವಾಡಿ: ಮಹಾಮಾರಿ ಕೊರೊನಾದಿಂದ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದ್ದರ ಪರಿಣಾಮ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ರೋಗದ ಆತಂಕ ಹಾಸು ಹೊಚ್ಚಾಗಿದೆ.
ಜನತೆ ಭಯಭೀತರಾಗಿದ್ದಾರೆ. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಪ್ರದೇಶಗಳು ಈಗ ಬಿಕೋ ಎನ್ನುತ್ತಿವೆ. ಮನೆಯಿಂದ ಹೊರಗೆ ಬರಲು ಜನರು ಹೆದರುತ್ತಿದ್ದಾರೆ. ಮಾಸ್ಕ್ಧ ರಿಸಿಕೊಂಡರೂ ಕೊರೊನಾ ಭಯ ಕಾಡುತ್ತಿದೆ. ಕೊರೊನಾ ಭೀತಿಯಿಂದ ಜನರು ಮಾಂಸ ಆಹಾರ ಸೇವನೆ ಕೈಬಿಟ್ಟಿದ್ದು, ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ ಕೋಳಿ ಮಾಂಸ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.
ಗ್ರಾಹಕರಿಲ್ಲದೆ ಮಾಂಸ ಮಾರುಕಟ್ಟೆ ಭಣಗುಡುತ್ತಿದೆ. ಬಹುತೇಕ ವ್ಯಾಪಾರದ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿವೆ. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ವ್ಯಾಪಾರ ಶುರುಮಾಡುತ್ತಿದ್ದ ಕೋಳಿ ಮತ್ತು ಕುರಿ ಮಾಂಸದ ವರ್ತಕರು ಕೊರೊನಾ ಆತಂಕ ಕಾಲಿಟ್ಟ ನಂತರ ನಷ್ಟದ ಹೊಡೆತ ಅನುಭವಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಮಾಂಸ ಆಹಾರ ಪ್ರಿಯರು ಮಾರುಕಟ್ಟೆಯತ್ತ ಮುಖ ಮಾಡದ ಕಾರಣ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ.
ಕಲಬುರಗಿ ನಗರದಿಂದ ವಾಡಿ ನಗರಕ್ಕೆ ಆಗುತ್ತಿದ್ದ ಕೋಳಿ ಸರಬರಾಜು ಸ್ಥಗಿತವಾಗಿದೆ. ಕುರಿಗಳ ಸರಬರಾಜು ನಿಂತಿದೆ. 180ರೂ. ಕೆ.ಜಿ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಈಗ 100ರೂ. ಗೆ ಕೆ.ಜಿ ಕೊಟ್ಟರೂ ಯಾರೂ ಕೊಳ್ಳುತ್ತಿಲ್ಲ. ವಾಡಿ ಮಾಂಸ ರುಕಟ್ಟೆಯಲ್ಲಿ ಒಟ್ಟು 25 ಕೋಳಿ ಮಾಂಸದ ಅಂಗಡಿಗಳಿವೆ. ಎಂಟು ಕುರಿ ಮಾಂಸದ ಅಂಗಡಿಗಳಿವೆ. ಸದ್ಯ ಕುರಿ ಮಾಂಸದ ಎರಡು ಅಂಗಡಿ, ಕೋಳಿ ಮಾಂಸದ ಮೂರು ಅಂಗಡಿಗಳು ಮಾತ್ರ ತೆರೆದಿವೆ.
ಒಂದು ಅಂಗಡಿಯಿಂದ ದಿನಕ್ಕೆ ಸುಮಾರು 20 ಕೋಳಿ ಮಾಂಸ ವ್ಯಾಪಾರವಾಗುತ್ತಿತ್ತು. ಈಗ ದಿನವಿಡಿ ಅಂಗಡಿ ತೆರೆದು ಕುಳಿತರೂ ಎರಡು ಕೋಳಿ ಮಾಂಸ ವ್ಯಾಪಾರವಾಗುತ್ತಿಲ್ಲ. ಮಾಂಸದ ವ್ಯಾಪಾರವೇ ನಿಂತುಹೋಗಿದೆ ಎಂದು ವ್ಯಾಪಾರಿಗಳಾದ ಮಹ್ಮದ್ ಇರ್ಫಾನ್, ಮಹ್ಮದ್ ಸಿದೀಜ್, ತಬರೇಜ್ ಖುರೇಶಿ ಹಾಗೂ ಮಹ್ಮದ್ ಆರೀಫ್ ಆತಂಕ ವ್ಯಕ್ತಪಡಿಸಿದ್ದಾರೆ.