Advertisement

ವಾವ್ಹಾವ್‌ ವಡೆ!

10:05 AM Dec 19, 2019 | mahesh |

ಚಳಿಗಾಲದಲ್ಲಿ ಬಾಯಿ ಚಪಲ ಜಾಸ್ತಿ. ಸಂಜೆ ಹೊತ್ತು ಕಾಫಿ-ಟೀ ಜೊತೆಗೆ ಏನಾದರೂ ಕುರುಕು ತಿಂಡಿ ತಿನ್ನಲು ಮನಸ್ಸು ಹವಣಿಸುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಯಾರಾದರೂ ಬಿಸಿಬಿಸಿಯಾದ ವಡೆ ಕೊಟ್ಟರೆ… ಆಹಾ, ಅದನ್ನು ನೆನಸಿಕೊಂಡರೇ ಬಾಯಲ್ಲಿ ನೀರೂರುತ್ತದಲ್ಲವೇ. ವಡೆ ಅಂದರೆ ಉದ್ದಿನದ್ದೇ ಆಗಿರಬೇಕಿಲ್ಲ, ತರಕಾರಿ, ಬ್ರೆಡ್‌, ಅವಲಕ್ಕಿ ಬಳಸಿಯೂ ರುಚಿಕಟ್ಟಾದ ವಡೆ ತಯಾರಿಸಬಹುದು. ಹೊಸ ಬಗೆಯ ವಡೆ ತಯಾರಿಕೆ ಕುರಿತ ರೆಸಿಪಿಗಳು ಇಲ್ಲಿವೆ…

Advertisement

1. ಹೂ ಕೋಸು
ಬೇಕಾಗುವ ಸಾಮಗ್ರಿ: ಒಂದು ಹೂಕೋಸು, 2 ಕಪ್‌ ಕಡಲೆ ಹಿಟ್ಟು, ಎರಡು ಚಮಚ ಖಾರದ ಪುಡಿ, ಅರ್ಧ ಚಮಚ ಜೀರಿಗೆ, ಎಳ್ಳು, ಕರಿಬೇವು, ಕೊತ್ತಂಬರಿ, ಇಂಗು- ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಮಾಡುವ ವಿಧಾನ: ಹೂಕೋಸು ಬಿಡಿಸಿ, ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಜೀರಿಗೆ, ಇಂಗು, ಕರಿಬೇವನ್ನು ರುಬ್ಬಿ, ಕಡಲೆ ಹಿಟ್ಟಿಗೆ ಬೆರೆಸಿ. ಉಪ್ಪು, ಖಾರದ ಪುಡಿ, ನೀರು ಬೆರೆಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ. ಹೂ ಕೋಸಿನ ತುಂಡನ್ನು ಹಿಟ್ಟಿನಲ್ಲಿ ಅದ್ದಿ, ಹೊಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.

2. ಬ್ರೆಡ್‌
ಬೇಕಾಗುವ ಸಾಮಗ್ರಿ: ಎರಡು ಮಧ್ಯಮ ಆಕಾರದ ಬ್ರೆಡ್‌, ಒಂದು ಪಾವು ಕಡಲೆ ಹಿಟ್ಟು, ಸ್ವಲ್ಪ ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಬ್ರೆಡ್‌ನ್ನು ಚೂರು ಮಾಡಿ, ನೀರಿನಲ್ಲಿ ನೆನೆಸಿ ನಂತರ ಹಿಂಡಿ, ಹರಿದು ಮುದ್ದೆ ಮಾಡಿಕೊಳ್ಳಿ. ಉಪ್ಪು, ತೆಂಗಿನ ತುರಿ, ಶುಂಠಿ, ಹಸಿಮೆಣಸನ್ನು ಚೆನ್ನಾಗಿ ರುಬ್ಬಿ, ಕಡಲೆ ಹಿಟ್ಟಿನ ಜೊತೆಗೆ ಸೇರಿಸಿ. ಆ ಮಿಶ್ರಣವನ್ನು ಬ್ರೆಡ್‌ ಜೊತೆಗೆ ಹಾಕಿ, ಚೆನ್ನಾಗಿ ನಾದಿ. ನಂತರ, ಚಿಕ್ಕ ಚಿಕ್ಕ ವಡೆಗಳನ್ನು ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.

Advertisement

3. ಅವಲಕ್ಕಿ
ಬೇಕಾಗುವ ಸಾಮಗ್ರಿ: 1 ಬಟ್ಟಲು ಅವಲಕ್ಕಿ, 1 ಪಾವು ಕಡಲೆ ಹಿಟ್ಟು, ಈರುಳ್ಳಿ, ಕೊತ್ತಂಬರಿ ಸೊಪ್ಪು, 12 ಹಸಿ ಮೆಣಸಿನಕಾಯಿ, ಅರ್ಧ ಚಮಚ ಅರಿಶಿಣ, ತೆಂಗಿನ ತುರಿ, ಜೀರಿಗೆ, ಉಪ್ಪು, ಸಕ್ಕರೆ- ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ,

ಮಾಡುವ ವಿಧಾನ: ಅವಲಕ್ಕಿಯನ್ನು ತೊಳೆದು, ಜೊತೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಹಸಿ ಮೆಣಸು, ಅರಿಶಿಣ, ತೆಂಗಿನ ತುರಿ, ಜೀರಿಗೆ ಪುಡಿ, ಉಪ್ಪು, ಸಕ್ಕರೆ ಎಲ್ಲವನ್ನೂ ಬೆರೆಸಿ ಕಲಸಿ. ನಂತರ, ಈ ಮಿಶ್ರಣವನ್ನು ಕಡಲೆ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ, ತುಸು ನೀರು ಹಾಗೂ ಎಣ್ಣೆ ಹಾಕಿ ವಡೆ ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಚಟ್ನಿ ಜೊತೆಗೆ ಸವಿದರೆ ಚೆನ್ನ.

4. ಹೆಸರುಬೇಳೆ
ಬೇಕಾಗುವ ಸಾಮಗ್ರಿ: ಒಂದು ಪಾವು ಹೆಸರು ಬೇಳೆ, ಒಂದು ತುಂಡು ಹಸಿ ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನಕಾಯಿ.

ಮಾಡುವ ವಿಧಾನ: ಹೆಸರುಬೇಳೆಯನ್ನು ರಾತ್ರಿ ನೆನೆ ಹಾಕಿ, ಬೆಳಗ್ಗೆ ಉಪ್ಪು, ಬೆಳ್ಳುಳ್ಳಿ, ಹಸಿ ಶುಂಠಿ, ಹಸಿ ಮೆಣಸು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ, ಹಿಟ್ಟನ್ನು ಕೈಯಿಂದ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

5. ಅಲಸಂದೆ
ಬೇಕಾಗುವ ಸಾಮಗ್ರಿ: ಒಂದು ಪಾವು ಅಲಸಂದೆ ಬೇಳೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಒಂದು ಚಮಚ ಜೀರಿಗೆ, ಈರುಳ್ಳಿ, ಚಿಟಿಕೆ ಸೋಡಾ, ಎಣ್ಣೆ.

ಮಾಡುವ ವಿಧಾನ: ಅಲಸಂದೆ ಬೇಳೆಯನ್ನು ನೆನೆ ಹಾಕಿ. ಅವು ಚೆನ್ನಾಗಿ ನೆನೆದ ಮೇಲೆ ಮೆಣಸು, ಉಪ್ಪು, ಜೀರಿಗೆ ಹಾಕಿ, ವಡೆ ತಟ್ಟಲು ಬರುವಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಆ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸೋಡಾ, ಉಪ್ಪು ಹಾಕಿ ಚೆನ್ನಾಗಿ ಕಲಸಿ, ತಟ್ಟಿ, ಎಣ್ಣೆಯಲ್ಲಿ ಕರಿದರೆ ಅಲಸಂದೆ ವಡೆ ತಯಾರು.

6. ಕಡಲೆ ಬೇಳೆ ವಡೆ
ಬೇಕಾಗುವ ಸಾಮಗ್ರಿ: 2 ಕಪ್‌ ಕಡಲೆ ಬೇಳೆ, ಅರ್ಧ ಕಪ್‌ ಉದ್ದಿನ ಬೇಳೆ, ಸಣ್ಣ ತುಂಡು ಹಸಿ ಶುಂಠಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಉಪ್ಪು, ಚಿಟಿಕೆ ಸೋಡಾ, ಈರುಳ್ಳಿ, ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡಲೆ ಬೇಳೆ ಮತ್ತು ಉದ್ದಿನ ಬೇಳೆಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ. ನಂತರ ಉಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಎಲ್ಲವನ್ನೂ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ ಸೇರಿಸಿ, ವಡೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

-ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next