Advertisement
ನವವೃಂದಾವನ ಗಡ್ಡಿಯಲ್ಲಿ ಒಂಬತ್ತು ಯತಿಗಳ ವೃಂದಾವನಗಳಿದ್ದು, ಆಂಜನೇಯ ಸ್ವಾಮಿ ದೇವಾಲಯದ ಎದುರು ವ್ಯಾಸರಾಜರ ವೃಂದಾವನವಿತ್ತು. ಅದರ ಮುಂದಿನ ಕಲ್ಲಿನ ಮಂಟಪ ಹಾಗೂ ವೃಂದಾವನ ಮೇಲಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸುಮಾರು 2-3 ಅಡಿ ನೆಲ ಅಗೆದು ನಿಧಿಗಾಗಿ ಶೋಧ ನಡೆಸಲಾಗಿದೆ. 480 ವರ್ಷಗಳ ಹಿಂದೆ ನಿರ್ಮಿಸಿದ್ದ ವೃಂದಾವನ ಹಾಗೂ ಕಲ್ಲುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿರುವುದು ಭಕ್ತರಲ್ಲಿ ತೀವ್ರ ನೋವನ್ನುಂಟು ಮಾಡಿದೆ.
Related Articles
ಎಂಟು ತಿಂಗಳ ಹಿಂದೆ ಕಡೆಬಾಗಿಲು ಆನೆಗೊಂದಿ ಮಧ್ಯೆ ಇರುವ ಸುಂಕದಕಟ್ಟೆ ಆಂಜನೇಯ ಗುಡಿ ಅಗೆದು ಧ್ವಂಸಗೊಳಿಸಲಾಗಿತ್ತು. ತನಿಖೆಗೆ ತಂಡ ರಚನೆ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೋತಿಲಾಲ್ ಲಮಾಣಿ, ತಹಶೀಲ್ದಾರ್ ವೀರೇಶ್ ಬಿರಾದಾರ್, ಗ್ರಾಮೀಣ ಪಿಎಸೈ ಪ್ರಕಾಶ ಮಾಳೆ ಹಾಗೂ ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ, ಡಿವೈಎಸ್ಪಿ ಚಂದ್ರಶೇಖರ, ಸಿಪಿಐ ಸುರೇಶ ತಳವಾರ ಹಾಗೂ ಪಿಎಸೈ ಪ್ರಕಾಶ ಮಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ತ್ವರಿತ ಬಂಧನ ಮತ್ತು ತನಿಖೆಗೆ ಗಂಗಾವತಿ ಸಿಪಿಐ ಸುರೇಶ ತಳವಾರ ನೇತೃತ್ವದಲ್ಲಿ ವೈಜ್ಞಾನಿಕ ತನಿಖಾ ತಂಡ ರಚಿಸಿ ಎಸ್‌ಪಿ ರೇಣುಕಾ ಸುಕುಮಾರನ್ ಆದೇಶಿಸಿದ್ದಾರೆ.
ಹಿನ್ನೆಲೆ ಏನು?: ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಧ್ವಪರಂಪರೆಯ ಒಂಭತ್ತು ಯತಿಗಳ ವೃಂದಾವನಗಳದ್ದು, ಪ್ರತಿ ವರ್ಷ ಮಂತ್ರಾಲಯ ಮಠ, ಉತ್ತಾರಾಧಿಮಠ, ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಗಳು ಮತ್ತು ಭಕ್ತರು ಆರಾಧನೆ ನಡೆಸಿ ಧಾರ್ಮಿಕ ಆಚರಣೆ ನಡೆಸುತ್ತಾರೆ. ವ್ಯಾಸರಾಜರು ವಿಜಯನಗರ ಸಾಮ್ರಾಜ್ಯ ಅರಸರ ರಾಜಗುರುಗಳಾಗಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಆಂಜನೇಯ ಸ್ವಾಮಿ ಮೂರ್ತಿ ಸೇರಿ ಹಂಪಿಯ ಚಕ್ರತೀರ್ಥ ಹತ್ತಿರ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಶ್ರೀಕೃಷ್ಣದೇವರಾಯರಿಗೆ ಕುಹಾದೋಷ ಉಂಟಾದಾಗ ಒಂದು ದಿನದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಅರಸರಾಗಿ ರಾಜನಿಗೆ ಬಂದ ದೋಷ ನಿವಾರಣೆ ಮಾಡಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಪುರಂದರದಾಸ, ಕನಕದಾಸ ಸೇರಿ ಹಲವು ದಾಸವರೇಣ್ಯರಿಗೆ ವ್ಯಾಸರಾಜರು ದೀಕ್ಷೆ ನೀಡಿ ಹರಿಭಕ್ತರನ್ನಾಗಿಸಿದ್ದರು. 1539ರಲ್ಲಿ ವ್ಯಾಸರಾಜರು ವೃಂದಾವನಸ್ಥರಾದ ಸಂದರ್ಭ ಆನೆಗೊಂದಿಯ ನವವೃಂದಾವನದಲ್ಲಿ ಪದ್ಮನಾಭತೀರ್ಥ, ಶ್ರೀರಾಮತೀರ್ಥ, ಶ್ರೀಸುಧೀಂದ್ರತೀರ್ಥ, ಕವೀಂದ್ರತೀರ್ಥ ವೃಂದಾವನಗಳ ಮಧ್ಯೆ ವ್ಯಾಸರಾಜರ ವೃಂದಾವನಗಳು ಮತ್ತು ಎದುರಿಗೆ ಆಂಜನೇಯ ದೇಗುಲವಿದೆ.
ಧ್ವಂಸಕ್ಕೂ ಮುಂಚೆ ಪೂಜೆ?
ಗಂಗಾವತಿ: ನವವೃಂದಾವನದಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆನ್ನಲಾಗಿದೆ.
ಹಗಲಿನಲ್ಲಿ ಪೂಜೆ ಮಾಡಿದರೆ ಇಲ್ಲಿರುವ ಕೋತಿಗಳು ಎಲ್ಲವನ್ನೂ ಎತ್ತಿಕೊಂಡು ಹೋಗುತ್ತವೆ. ರಾತ್ರಿ ಮಾಡಿದ್ದರಿಂದ ಬೆಳಗ್ಗೆ ಪೂಜೆ ಮಾಡಲು ತೆರಳಿದವರಿಗೆ ಪೂಜೆ ಮಾಡಿದ ಸಾಮಗ್ರಿಗಳು ಕಂಡು ಬಂದಿವೆ.
Advertisement