Advertisement

ಸುಜ್ಞಾನದ ಕಡೆ ವ್ಯಾಸ ಮಹರ್ಷಿ ದಾರಿ; ನಿರ್ಮಲಾನಂದನಾಥ ಸ್ವಾಮೀಜಿ

06:19 PM Jul 15, 2022 | Team Udayavani |

ನಾಗಮಂಗಲ: ವೃತ್ತವೊಂದನ್ನು ವ್ಯಾಸವು ವಿಭಜಿಸುವಂತೆ ಅಖಂಡ ಜ್ಞಾನವನ್ನು ನಾಲ್ಕು ಭಾಗವಾಗಿ ಭಾಗ ಮಾಡಿಕೊಟ್ಟ ಕೀರ್ತಿ ವೇದ ವ್ಯಾಸ ಮಹರ್ಷಿಗಳಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ಸುಜ್ಞಾನದ ಕಡೆಗೆ: ಗಣಿತದಲ್ಲಿ ವೃತ್ತವನ್ನು ವಿಭಜಿಸುವುದು ವ್ಯಾಸ. ಅಂತೆಯೇ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನು ಸಮವಾಗಿ ವಿಭಜಿಸಿದ ವ್ಯಾಸ ಮಹರ್ಷಿಗಳು ವೇದ, ಪುರಾಣ ಮತ್ತು ವಿಜ್ಞಾನಕ್ಕೂ ಇರುವ ಬಾಂಧವ್ಯವನ್ನು ತಿಳಿಸುವ ಮೂಲಕ ಜ್ವಾನವನ್ನು ಬಳಸಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವಂತೆ ದಾರಿ ತೋರಿಸಿದರು ಎಂದು ಹೇಳಿದರು.

ಗುರುಪೂರ್ಣಿಮೆ: ಪೃಥ್ವಿಯ ಜೀವನಸಾರವಾದ ವೇದಗಳನ್ನು ವ್ಯಾಸಪೂರ್ಣಿಮೆಯಂದು ಕೊಟ್ಟಿದ್ದರಿಂದ ವ್ಯಾಸ ಪೂರ್ಣಿಮೆ, ಗುರುಪೂರ್ಣಿಮೆ ಎಂದು ಕರೆಯುತ್ತಾರೆ ಎಂದು ತಿಳಿಸಿದರು. ಮನುಷ್ಯನಿಗೆ ಆರೋಗ್ಯ ಕೆಟ್ಟರೆ ಔಷಧಿ ಕೊಡುತ್ತಾರೆ. ಆದರೆ, ಮನಸ್ಸಿನ ಆರೋಗ್ಯ ಕೆಟ್ಟರೆ ಜ್ಞಾನದ ಔಷಧಿ ಬೇಕಾಗುತ್ತದೆ. ಅಂತಹ ಔಷಧಿಯನ್ನು ಸರ್ವರಿಗೂ ಹಂಚಿ ಅಜ್ಞಾನ ತೊಲಗಿಸುವವನೇ ಗುರು ಎಂದರು.

ಉಪದೇಶ ಪಾಲಿಸಿ: ಗೌತಮ ಬುದ್ಧನ ಸಿದ್ಧಾಂತಗಳನ್ನು ಉಲ್ಲೇಖೀಸುತ್ತ ಗುರುವಿನ ಉಪದೇಶ ಮತ್ತು ಬೋಧನೆಯಿಂದ ಇಂದಲ್ಲ ನಾಳೆ ಗಮ್ಯ ತಲುಪುಲು ಸಾಧ್ಯ ಎನ್ನುವ ಮೂಲಕ ಭಾರತದ ಆಧ್ಯಾತ್ಮ ಸಾಧನೆ ಮೈಲಿಗಲ್ಲುಗಳನ್ನು ಮೌಲ್ಯಯುತ ಕಥೆಗಳ ಮೂಲಕ ಉಪದೇಶಿಸಿದರು. ಅಲ್ಲದೇ, ಗುರುವಿನ ಮಾರ್ಗದರ್ಶನವನ್ನು ಸರಿಯಾದ ಮಾರ್ಗದಲ್ಲಿ ಪಾಲಿಸಿದರೆ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಬಹುದು ಎಂದು ಹೇಳಿದರು.

ಆಧ್ಯಾತ್ಮ ಸಾಧಕರೂ, ವಿದ್ವಾಂಸರೂ ಆದ ರಾಮಚಂದ್ರ ಅಪ್ಪಾಮೇತ್ರೆ ಮಾತನಾಡಿ, ಗುರುವಿನ ಮಹತ್ವ ಕುರಿತ ವ್ಯಾಖ್ಯಾನದೊಂದಿಗೆ ಜಗತ್ತಿನಲ್ಲಿ ಗುರು ಮತ್ತು ಹುಣ್ಣಿಮೆಗಿರುವ ವಿಶಿಷ್ಟ ಬಾಂಧವ್ಯ ಸಮೀಚೀನಗೊಳಿಸಿ, ದಿನದ ವಿಶೇಷತೆ ಬಣ್ಣಿಸಿದರು.

Advertisement

ಜಗತ್ತಿಗೇ ಬೆಳಕು: ಚುಂಚನಗಿರಿಯ ಹಿರಿಯ ಸಂತ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಪಂಚ ಋಣಗಳಿಂದ ಮುಕ್ತನಾಗಿ ಗುರು ಕರುಣೆಯಿಂದ ಬೆಳೆದವನು ಜಗತ್ತಿಗೇ ಬೆಳಕಾಗುತ್ತಾನೆ. ಗುರು ಸ್ಮರಣೆಯಲ್ಲಿ ಕೈವಲ್ಯ ಕಾಣುವಂತಾಗಲಿ ಎಂದು ಹಾರೈಸಿದರು. ಪದ್ಮ ಪ್ರಶಸ್ತಿ ಪುರಸ್ಕೃತೆ ಅಂಕೋಲಾದ ತುಳಸಿಗೌಡ, ಕೆ.ಆರ್‌. ಪೇಟೆ ತಹಶೀಲ್ದಾರ್‌ ಎಂ.ಆರ್‌. ರೂಪಾ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಖಾಮಠಗಳ
ಯತಿವರ್ಯರು, ಆದಿಚುಂಚನಗಿರಿ ವಿವಿಯ ಉಪ ಕುಲಪತಿ ಡಾ. ಎಂ.ಎ.ಶೇಖರ್‌, ರಿಜಿಸ್ಟ್ರಾರ್‌ ಡಾ.ಸಿ.ಕೆ. ಸುಬ್ಬರಾಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next