ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಕಾರಣದಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯಸ್ಥನ ಸ್ಥಾನಕ್ಕೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಕ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರು ಈ ಮೊದಲು ಎನ್ ಸಿಎ ಮುಖ್ಯಸ್ಥರಾಗಿದ್ದರು. ಅವರು ತರಬೇತುದಾರರಾಗಿ ನೇಮಕವಾದ ಕಾರಣದಿಂದ ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಜಾಗಕ್ಕೆ ಒಂದು ಕಾಲದ ದ್ರಾವಿಡ್ ಬ್ಯಾಟಿಂಗ್ ಪಾರ್ಟ್ನರ್ ಲಕ್ಷ್ಮಣ್ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ:ಸೆಮಿ ಸೋಲಿನ ಬಳಿಕ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪಾಕ್ ವೇಗಿ ಹಸನ್ ಅಲಿ
ಈ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ ಐ ಸೌರವ್ ಗಂಗೂಲಿ ಅವರನ್ನು ಸಂಪರ್ಕಿಸಿದಾಗ ಹೌದು ಈ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ ಲಕ್ಷ್ಮಣ್ ಅವರ ನಿರ್ಧಾರದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.
“ಲಕ್ಷ್ಮಣ್ ಎನ್‌ಸಿಎ ಪಾತ್ರವನ್ನು ವಹಿಸಿಕೊಳ್ಳುವುದನ್ನು ಸೌರವ್ ಮತ್ತು ಜಯ್ ಶಾ ಇಬ್ಬರೂ ಇಷ್ಟಪಡುತ್ತಾರೆ. ಆದರೆ ಅಂತಿಮ ನಿರ್ಧಾರ ಲಕ್ಷ್ಮಣ್ ಅವರದ್ದೇ. ಅವರು ಈಗ ಕೋಚ್ ದ್ರಾವಿಡ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಆ ಇಬ್ಬರು ಒಟ್ಟಾಗಿ ಕೆಲಸ ಮಾಡುವುದು ಒಂದು ಉತ್ತಮ ಸಂಯೋಜನೆಯಾಗಿದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.