ಮುಂಬಯಿ: ಬ್ಯಾಟಿಂಗ್ ಗ್ರೇಟ್ ವಿವಿಎಸ್ ಲಕ್ಷ್ಮಣ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಡಿ. 13ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಉಳಿದ ತರಬೇತುದಾರರೂ ಅಂದು ಎನ್‌ಸಿಎ ಆಗಮಿಸಲಿದ್ದಾರೆ ಎಂದು ಶನಿವಾರದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಪ್ರಕಟಿಸಲಾಗಿದೆ.
ಆಸ್ಟ್ರೇಲಿಯ ಹಾಗೂ ಇಂಗ್ಲೆಂಡಿನ ಮಾಜಿ ಬೌಲಿಂಗ್ ಕೋಚ್ ಟ್ರಾಯ್ ಕೂಲಿ ಎನ್‌ಸಿಎಯ ಪೇಸ್ ಬೌಲಿಂಗ್ ಕೋಚ್ ಆಗಿದ್ದು, ಅವರು ಡಿ. 13ರಂದು ಬೆಂಗಳೂರು ತಲುಪಲಿದ್ದಾರೆ.
“ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥ ಸ್ಥಾನದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಡಿ. 13ರಂದು ಅವರು ಉಳಿದ ಕೋಚಿಂಗ್ ಸಿಬಂದಿಯೊಂದಿಗೆ ಬೆಂಗಳೂರಿನ ಎನ್‌ಸಿಎ ಕಚೇರಿಗೆ ಆಗಮಿಸಲಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ವೇಳೆಯೂ ಅವರು ಸ್ವಲ್ಪ ಕಾಲ ತಂಡದ ಜತೆ ಇರಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಎನ್‌ಸಿಎ ಕೋಚ್‌ಗಳಾಗಿರುವ ಹೃಷಿಕೇಶ್ ಕಾನಿಟ್ಕರ್ ಅಥವಾ ಸಿತಾಂಶು ಕೋಟಕ್ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತದ ಪ್ರಧಾನ ಕೋಚ್ ಆಗಿರಲಿದ್ದಾರೆ.
ಮಂಡೇಲ ಡಿನ್ನರ್‌ಗೆ ಆಹ್ವಾನ:
ಜ. 2ರಂದು ನಡೆಯಲಿರುವ ವಾರ್ಷಿಕ “ನೆಲ್ಸನ್ ಮಂಡೇಲ ಭೋಜನ ಕೂಟ’ಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರಿಗೆ “ಕ್ರಿಕೆಟ್ ಸೌತ್ ಆಫ್ರಿಕಾ’ ಆಹ್ವಾನ ನೀಡಿದೆ.