ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮತ್ತು ಮತ ದೃಢೀಕರಣ ಯಂತ್ರ (ವಿವಿಪ್ಯಾಟ್)ಗಳಲ್ಲಿನ ಮತ ಹೋಲಿಕೆ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮ 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದು ಬಹುತೇಕ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಚುನಾವಣಾ ಆಯೋಗ ನಿಗದಿಯಂತೆ ಮೇ 23ರಂದು ಲೋಕಸಮರದ ಫಲಿತಾಂಶವನ್ನು ಮೇ 23ರಂದು ಘೋಷಿಸಲು ಸಿದ್ಧತೆ ನಡೆಸಿತ್ತು. ಆದರೆ ಅಂತಿಮ ನಿಖರವಾದ ಫಲಿತಾಂಶ ಮೇ 24ರಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಕಾರಣ ವಿವಿ ಪ್ಯಾಟ್ ಗಳ ಹೋಲಿಕೆ ಸಂಖ್ಯೆ ಹೆಚ್ಚಿಸಿರುವುದು ಎಂದು ಹೆಸರು ಹೇಳಲು ಇಚ್ಚಿಸದ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮತ್ತು ಮತ ದೃಢೀಕರಣ ಯಂತ್ರ(ವಿವಿಪ್ಯಾಟ್)ಗಳಲ್ಲಿನ ಮತ ಹೋಲಿಕೆ ಸಂಖ್ಯೆಯನ್ನು ಸುಪ್ರೀಂಕೋರ್ಟ್ ಇದೀಗ ಒಂದು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಪ್ರತಿ ವಿಧಾನಸಭೆಯ 5 ಮತಗಟ್ಟೆಗೆ ಏರಿಸಿದೆ. (ಈ ಮೊದಲು ಪ್ರತಿ ವಿಧಾನಸಭೆಯ ಒಂದು ಮತಗಟ್ಟೆಯ ಮತ ಹೋಲಿಕೆ ಮಾಡಲಾಗುತ್ತಿತ್ತು) ಆ ನಿಟ್ಟಿನಲ್ಲಿ ಇದರಿಂದ ಅಂತಿಮ ಫಲಿತಾಂಶ ಐದಾರು ಗಂಟೆಗಳ ಕಾಲ ವಿಳಂಬವಾಗುವುದಲ್ಲದೇ ಪೂರ್ಣ ಪ್ರಮಾಣದ ಫಲಿತಾಂಶ ಮೇ 24ರಂದು ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ.
21 ವಿಪಕ್ಷಗಳು ಒಟ್ಟಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ಶೇ.50ರಷ್ಟು ಇವಿಎಂ ಮತಗಳ ಹೋಲಿಕೆ ಮಾಡಬೇಕೆಂದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದವು. ಆದರೆ ಸುಪ್ರೀಂಕೋರ್ಟ್ ವಿಪಕ್ಷಗಳ ಮನವಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಒಂದು ವೇಳೆ ಸುಪ್ರೀಂಕೋರ್ಟ್ ವಿಪಕ್ಷಗಳ ಮನವಿಯನ್ನು ಪುರಸ್ಕರಿಸಿದ್ದರೆ..ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದು ವಾರಗಳ ಕಾಲ ಕಾಯಬೇಕಾಗುತ್ತಿತ್ತು!
2019ರ ಲೋಕಸಭಾ ಚುನಾವಣೆಯಲ್ಲಿ 10.35 ಲಕ್ಷ ಇವಿಎಂಗಳಿವೆ..ಇದರಲ್ಲಿ 20,625 ಮತಗಟ್ಟೆಗಳ ಮತಗಳ ಫಲಿತಾಂಶವನ್ನು ತಾಳೆ ನೋಡಬೇಕಾಗಿದೆ. ಸುಪ್ರೀಂ ನಿರ್ದೇಶನದ ಪ್ರಕಾರ ಪ್ರತಿ ಮತಗಟ್ಟೆಯ 5ಇವಿಎಂಗಳ ವಿವಿಪ್ಯಾಟ್ ಸ್ಲಿಪ್ ಗಳನ್ನು ಸ್ವಯಂ(ದೈಹಿಕವಾಗಿ) ಆಗಿಯೇ ಲೆಕ್ಕಹಾಕಬೇಕಾಗಿದೆ. ಇದರಿಂದಾಗಿ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಲಿದೆ ಎಂದು ವರದಿ ತಿಳಿಸಿದೆ. ಒಂದು ವೇಳೆ ವಿವಿಪ್ಯಾಟ್ ಹೋಲಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಾರದಿದ್ದಲ್ಲಿ ಮೇ 23ರಂದೇ ಬಹುತೇಕ ಫಲಿತಾಂಶ ಘೋಷಣೆಯಾಗಲಿದೆ ಎಂದು ಹೇಳಿದೆ.