ಬೆಂಗಳೂರು: 2019ರ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರು ನಗರ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಯಲ್ಲೂ ವಿವಿ ಪ್ಯಾಟ್‌ಅನ್ನು ಕಡ್ಡಾಯಗೊಳಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕವಾಗಿ ಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗ ಬದ್ಧವಾಗಿದೆ. ಈಗಾಗಲೇ ಬಿಇಎಲ್ ತಾಂತ್ರಿಕ ಸಿಬ್ಬಂದಿ ಸಹಯೋಗದೊಂದಿಗೆ ವಿದ್ಯುನ್ಮಾನ ಮತಯಂತ್ರಗಳ ಪ್ರಥಮ ಹಂತದ ತಪಾಸಣೆ (ಎಫ್ಎಲ್ಸಿ)ಪ್ರಾರಂಭಿಸಲಾಗಿದ್ದು,
ಇವಿಎಂ ಯಂತ್ರಗಳ ಬಗ್ಗೆ ಜನಪ್ರತಿನಿಧಿಗಳಿಗೆ ಅನುಮಾನಗಳಿದ್ದರೆ ಅದನ್ನು ಬಗೆ ಹರಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಚುನಾವಣೆಯಲ್ಲಿ 5,225 ಬ್ಯಾಲೆಟ್ ಯೂನಿಟ್, 3,985 ಕಂಟ್ರೋಲ್ ಯೂನಿಟ್ ಹಾಗೂ 4,276 ವಿವಿ ಪ್ಯಾಟ್ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಎಷ್ಟು ಮತದಾರರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 32,00,942 ಮತದಾರರಿದ್ದು, ಇದರಲ್ಲಿ 1,65,134 ಪುರುಷರು 15,05,808 ಮಹಿಳೆಯರು ಸೇರಿದ್ದಾರೆ. ಮತಗಟ್ಟೆಗಳ ಪುನರ್ ವಿಂಗಡಣೆ ನಂತರ 2,997 ಮತಗಟ್ಟೆಗಳಿದ್ದು ಮತದಾರರ ಹೆಸರು ಕೈಬಿಟ್ಟಿದ್ದರೆ ಅಂತಹವರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಗುರುತಿನ ಚೀಟಿ ಹೊಂದಿದ ಮಾತ್ರಕ್ಕೆ ನೋಂದಾಯಿತ ಮತದಾರರಾಗುವುದಿಲ್ಲ. ಹೊಸದಾಗಿ ಮತದಾರರಾಗಿ ನೋಂದಣಿಯಾಗಲು, ನಮೂನೆ-6ರಲ್ಲಿ ಭರ್ತಿ ಮಾಡಿ, ಅದರೊಂದಿಗೆ ಒಂದು ಭಾವಚಿತ್ರ, ವಿಳಾಸ ದೃಢೀಕರಣ ಹಾಗೂ ಸಹಿ ಮೂಲಕ ಸಲ್ಲಿಸಬಹುದು ಎಂದು ಹೇಳಿದರು.
ಯಲಹಂಕದಲ್ಲಿ ಕ್ಷೇತ್ರದಲ್ಲಿ-376 ಬ್ಯಾಟರಾಯನಪುರ-397, ಯಶವಂತಪುರ-461, ದಾಸರಹಳ್ಳಿ-409,
ಮಹದೇವಪುರ-466, ಬೆಂಗಳೂರು ದಕ್ಷಿಣ-520, ಆನೇಕಲ್-368 ಮತಗಟ್ಟೆಗಳಿವೆ. 2019, ಜ.1ಕ್ಕೆ 18ವರ್ಷ ತುಂಬಿದ ಪ್ರತಿಯೊಬ್ಬರು ಮತದಾನಕ್ಕೆ ಅರ್ಹರಾಗಿದ್ದು, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಪ್ರತಿಯನ್ನು ನಮೂನೆ-6ರಲ್ಲಿ ಲಗತ್ತಿಸಿ ಕಂದಾಯ ಇಲಾಖೆ, ಬೆಂಗಳೂರು ಒನ್ ಹಾಗೂ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನುಡಿದರು.
ಗುರುತಿನ ಚೀಟಿ ಪಡೆಯಲು ಅಥವಾ ಗುರುತಿನ ಚೀಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು www.ceokarnataka.kar.nic.in ಅಥವಾ //www.ceokarnataka.kar.nic.in/ ಅನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ ವೆಬ್ ಸೈಟ್ ಮೂಲಕ ಹೆಸರನ್ನು ನೋಂದಯಿಸಬಹುದಾಗಿದೆ.