Advertisement

ವಿವಿಪ್ಯಾಟ್‌-ಇವಿಎಂ ವಿದ್ಯುನ್ಮಾನ ಯಂತ್ರ ಮಾಹಿತಿ

08:34 AM Feb 16, 2019 | |

ಬೀದರ: ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಪ್ಯಾಟ್‌ ಮತ್ತು ಇವಿಎಂ ವಿದ್ಯುನ್ಮಾನ ಯಂತ್ರಗಳ ಬಗ್ಗೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.

Advertisement

ಈ ವೇಳೆ ಚುನಾವಣಾ ಮಾಸ್ಟರ್‌ ತರಬೇತುದಾರರಾದ ಗೌತಮ ಅರಳಿ, ರಮೇಶ ಮಠಪತಿ ಅವರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವಿಪ್ಯಾಟ್‌ ಮತ್ತು ಇವಿಎಂ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಬ್ಯಾಲೇಟ್‌ ಪೇಪರ್‌, ಕಂಟ್ರೋಲ್‌ ಯೂನಿಟ್‌, ವಿವಿಪ್ಯಾಟ್‌, ಇವಿಎಂ ಯಂತ್ರಗಳ ಜೋಡಿಸುವಿಕೆ ಮತ್ತು ಅವುಗಳ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು. ಬಹಳಷ್ಟು ಹಂತಗಳಲ್ಲಿ ಈ ವಿದ್ಯುನ್ಮಾನ ಮತ ಯಂತ್ರಗಳು ಪರೀಕ್ಷೆಗೊಳಪಟ್ಟಿವೆ. ಸಾರ್ವಜನಿಕರಲ್ಲಿ ಈ ಯಂತ್ರಗಳ ಬಗ್ಗೆ ವಿಶ್ವಾಸ ಬರುವ ದಿಶೆಯಲ್ಲಿ ವ್ಯಾಪಕವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಗೌತಮ ಅರಳಿ ತಿಳಿಸಿದರು.
 
ಯುವಜನರು ಮತದಾರರ ಪಟ್ಟಿಯಲ್ಲಿ ತಪ್ಪದೇ ಹೆಸರನ್ನು ನೋಂದಾಯಿಸಬೇಕು. ಹಾಗೂ ಕಡ್ಡಾಯ ಮತದಾನ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ವಿಡಿಯೋಗಳನ್ನು ಸಿನಿಮಾ ಮಂದಿರಗಳು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಚುನಾವಣಾ ತಹಶೀಲ್ದಾರ್‌ ಜಗನ್ನಾಥರೆಡ್ಡಿ, ಮತ್ತು ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮಾಸ್ಟರ್‌ ಟ್ರೇನರ್‌ ಬಸಪ್ಪ ಪೂಜಾರಿ ಇತರರು ಇದ್ದರು.

24,718 ಯುವ ಮತದಾರರು ಸೇರ್ಪಡೆ: ಡಾ| ಮಹಾದೇವ
ಬೀದರ: ಜಿಲ್ಲೆಯ 1,504 ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ಆಳಂದನ 495 ಸೇರಿ ಒಟ್ಟು 1,999 ಮತಗಟ್ಟೆಗಳಿವೆ. 2019ರ ವಿಶೇಷ ಪರಿಷ್ಕರಣೆಯಲ್ಲಿ ಬೀದರ ಜಿಲ್ಲೆಯಲ್ಲಿ ಮಾತ್ರ 24,718 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಡಾ| ಎಚ್‌.ಆರ್‌. ಮಹಾದೇವ ಮಾಹಿತಿ ನೀಡಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 21,759 ಅಂಗವಿಕಲ ಮತದಾರರಿದ್ದಾರೆ ಎನ್ನುವ ಮಾಹಿತಿ ಇದೆ. ಈ ಪೈಕಿ ಈಗಾಗಲೇ 11,108 ಜನರು ಮತದಾರರ ಪಟ್ಟಿ ವ್ಯಾಪ್ತಿಗೆ ಬಂದಿದ್ದಾರೆ. ಇನ್ನುಳಿದವರನ್ನು ಕೂಡ ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು. ಒಟ್ಟು 254 ಅಧಿ ಕಾರಿಗಳು ಒಳಗೊಂಡು ಚುನಾವಣೆಯನ್ನು ಸುವ್ಯವಸ್ಥಿತವಾಗಿ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು. 

ಹೊಸ ಆ್ಯಪ್‌: ಚುನಾವಣೆಗೆ ಸಂಬಂಧಿಸಿದ ಯಾವುದೇ ಅಕ್ರಮಗಳ ಕುರಿತು ಛಾಯಾಚಿತ್ರಗಳು ಹಾಗೂ ವಿಡಿಯೋಗಳನ್ನು ಸಿ-ವಿಜಿಲ್‌ ಆ್ಯಪ್‌ ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದು.

ಅಲ್ಲಿನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಕಳುಹಿಸಿಕೊಡಬಹುದಾಗಿದೆ. ಈ ಆ್ಯಪ್‌ನಲ್ಲಿ ಸ್ವೀಕರಿಸಿದ ದೂರುಗಳನ್ನು ಸಂಬಂಧಪಟ್ಟ ಚುನಾವಣಾ ಅಧಿಕಾರಿ ಅಥವಾ ಸಿಬ್ಬಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ರವಾನಿಸಲಾಗುತ್ತದೆ. ಯಾವುದೇ ಮತದಾರರು ಆ್ಯಂಡ್ರಾಯಿಡ್‌ ಮೊಬೈಲ್‌ ಮೂಲಕ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ದೂರುಗಳ ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿದರು.

ಉಚಿತ ಸಹಾಯವಾಣಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಸಹಾಯವಾಣಿ ಲಭ್ಯವಿದೆ. ಯಾವುದೇ ಮತದಾರ ಮೊಬೈಲ್‌ ಅಥವಾ ಸ್ಥಿರ ದೂರವಾಣಿ ಮೂಲಕ ಉಚಿತವಾಗಿ 1950 ಸಂಖ್ಯೆಗೆ ಕರೆ ಮಾಡಿ ತಮ್ಮ ದೂರು, ಮಾಹಿತಿ, ಸಲಹೆ ನೀಡಬಹುದಾಗಿದೆ ಎಂದು ತಿಳಿಸಿದರು.

ಮೊಬೈಲ್‌ ಸಂಖ್ಯೆ ನೀಡಿ: ಜಿಲ್ಲೆಯ ಎಲ್ಲ ಮತದಾರರು ಮತ್ತು ಯುವ ಮತದಾರರು ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಲ್ಲಿಸುವ ಅರ್ಜಿಯಲ್ಲಿ ತಪ್ಪದೇ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಹಳೆ ಗುರುತಿನ ಚೀಟಿ ಇದ್ದವರು ಕೂಡ ಮೊಬೈಲ್‌ ಸಂಖ್ಯೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಶಿಕಾರಿ ರುದ್ರೇಶ ಗಾಳಿ, ಚುನಾವಣಾ ತಹಶೀಲ್ದಾರ್‌ ಜಗನ್ನಾಥ ರೆಡ್ಡಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next