Advertisement

ಅವಧಿಗೆ ಮುನ್ನ ಚುನಾವಣೆ: ವಿವಿಪ್ಯಾಟ್‌ ಪೂರೈಕೆ ಕಷ್ಟ?

06:00 AM Jul 26, 2018 | |

ಹೊಸದಿಲ್ಲಿ: ಅವಧಿಗಿಂತ ಮೊದಲು ಲೋಕಸಭೆ ಚುನಾವಣೆ ನಡೆದರೆ 16.15 ಲಕ್ಷ ಮತದೃಢೀಕರಣ ಮುದ್ರಣ ವ್ಯವಸ್ಥೆ (ವಿವಿಪ್ಯಾಟ್‌) ಇರುವ ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದುಕೊಳ್ಳುವುದು ಚುನಾವಣಾ ಆಯೋಗಕ್ಕೆ ಕಷ್ಟವಾಗಲಿದೆ. ಈ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಬೆಂಗಳೂರಿನಲ್ಲಿರುವ ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಹೈದರಾಬಾದ್‌ನಲ್ಲಿರುವ ಇಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಲಿಮಿಟೆಡ್‌ (ಇಸಿಐಎಲ್‌) ಸಂಸ್ಥೆಗಳಿಗೆ ವಿವಿಪ್ಯಾಟ್‌ ಇರುವ ಮತಯಂತ್ರಗಳನ್ನು ಉತ್ಪಾದಿಸಲು ಚುನಾವಣಾ ಆಯೋಗ ಮನವಿ ಮಾಡಿತ್ತು. ಆದರೆ ಇದುವರೆಗೆ ಕೇವಲ 3.49 ಲಕ್ಷ ವಿವಿಪ್ಯಾಟ್‌ ಮತಯಂತ್ರಗಳು ಅಂದರೆ ಶೇ.22ರಷ್ಟು ಮಾತ್ರವೇ ಕೇಂದ್ರ ಚುನಾವಣಾ ಆಯೋಗದ ಕೈ ಸೇರಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಜೂ.19ರ ವರೆಗಿನ ಮಾಹಿತಿ ಪ್ರಕಾರ 5.8 ಲಕ್ಷ ಬ್ಯಾಲೆಟ್‌ ಯುನಿಟ್‌ (ಶೇ.42), 4 ಲಕ್ಷ ಕಂಟ್ರೋಲ್‌ ಯುನಿಟ್‌ (ಶೇ.43) ಮತ್ತು 3.48 ಲಕ್ಷ ವಿವಿಪ್ಯಾಟ್‌ (ಶೇ.22)ಗಳು ಮಾತ್ರ ಆಯೋಗಕ್ಕೆ ಸಿದ್ಧಗೊಂಡು ಸಲ್ಲಿಕೆಯಾಗಿದೆ. 

Advertisement

ಇವಿಎಂಗಳ ಬಗ್ಗೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಹೊರತುಪಡಿಸಿದ ರಾಜಕೀಯ ಪಕ್ಷಗಳು ಪ್ರಬಲವಾಗಿ ಆಕ್ಷೇಪ ಮಾಡುತ್ತಿರುವಂತೆಯೇ ಮುಂದಿನ ಚುನಾವಣೆ ಒಳಗಾಗಿ 16.15 ಲಕ್ಷ ವಿವಿಪ್ಯಾಟ್‌ ಹೊಂದಿರುವ ಇವಿಎಂಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಚುನಾವಣಾ ಆಯೋಗಕ್ಕಿದೆ. ಕರ್ನಾಟಕ, ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭೆ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಕೆ ಮಾಡಿದ್ದಾಗ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು.

ಪಡೆದುಕೊಳ್ಳುತ್ತೇವೆ: ಇದೇ ವೇಳೆ ಬುಧವಾರ ಪ್ರತಿಕ್ರಿಯೆ ನೀಡಿದ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದಂತೆ 2019ರ ಚುನಾವಣೆ ಒಳಗಾಗಿ ಎಲ್ಲಾ ವಿವಿಪ್ಯಾಟ್‌ ಯಂತ್ರಗಳ ಉತ್ಪಾದನೆ ಪೂರ್ತಿಯಾಗಲಿದೆ ಎಂದು ಹೇಳಿದೆ. ಇಡೀ ದೇಶಕ್ಕೆ ಅನುಗುಣವಾಗುವಂತೆ ಚುನಾವಣಾ ಆಯೋಗ 16.35 ಲಕ್ಷ ಕಂಟ್ರೋಲ್‌ ಯುನಿಟ್‌, 22.37 ಲಕ್ಷ ಬ್ಯಾಲೆಟ್‌ ಯುನಿಟ್‌, 16.35 ಲಕ್ಷ ವಿವಿ ಪ್ಯಾಟ್‌ಗಳು ಬೇಕು. ಒಂದು ಕಂಟ್ರೋಲ್‌ ಯುನಿಟ್‌ ಮತ್ತು ಬ್ಯಾಲೆಟ್‌ ಯುನಿಟ್‌ ಸೇರಿ ಒಂದು ಇವಿಎಂ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next