ಬೆಂಗಳೂರು: ವಿಶ್ವೇಶ್ವರಪುರದ ಸಜ್ಜನರಾವ್ ಸರ್ಕಲ್ ಸಮೀಪದ ಸರ್ಕಾರಿ ಆಸ್ಪತ್ರೆಯನ್ನು ರಾತ್ರೋರಾತ್ರಿ ಮುಚ್ಚಿರುವುದನ್ನು ವಿರೋಧಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ರಮೇಶ್, ಆಸ್ಪತ್ರೆ ಸ್ಥಳವನ್ನು ಕಳೆದ 60 ವವರ್ಷಗಳ ಹಿಂದೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸಜ್ಜನರಾವ್ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ದಾನ ಮಾಡಿದ್ದರು.
ಮೇ 4ರಂದು ರಾತ್ರೋರಾತ್ರಿ ಯಾವುದೇ ಸೂಚನೆ ನೀಡದೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳೇ ಹೆಚ್ಚಾಗಿದ್ದು, ಇದ್ದ ಒಂದೇ ಒಂದು ಸರ್ಕಾರಿ ಆಸ್ಪತ್ರೆಯನ್ನು ಮುಚ್ಚಿರುವುದರಿಂದ ಬಡವರು ಪರದಾಡುವಂತಾಗಿದೆ ಎಂದು ಹೇಳಿದರು.
ಕಾರ್ಪೊರೇಟರ್ ವಾಣಿ ವಿ. ರಾವ್ ಅವರು ಉದ್ದೇಶಪೂರ್ವಕವಾಗಿ ಆಸ್ಪತ್ರೆ ಮುಚ್ಚಿಸಿದ್ದಾರೆ. ಈ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳೇ ಹೆಚ್ಚಾಗಿರುವುದರಿಂದ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಈ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಇದರ ಹಿಂದೆ ಈ ಜಾಗವನ್ನು ಕಬಳಿಸುವ ಹುನ್ನಾರವೂ ಇದೆ ಎಂದು ವೆಂಕಟ್ ಎಂಬವರು ಆಕ್ರೋಶ ವ್ಯಕ್ತಪಡಿಸಿದರು.
ಬೀಗ ಹಾಕುವ ಮುನ್ನ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದೇನೆ. ಸರ್ಕಾರಿ ಆಸ್ಪತ್ರೆ ಮುಚ್ಚಿಸುವಷ್ಟು ಕೀಳು ಮಟ್ಟಕ್ಕೆ ನಾನು ಇಳಿದಿಲ್ಲ.
-ವಾಣಿ ವಿ. ರಾವ್, ಬಿಬಿಎಂಪಿ ಸದಸ್ಯೆ