Advertisement

ರಣಹದ್ದು ವನ್ಯಜೀವಿಧಾಮವೀಗ ಪರಿಸರ ಸೂಕ್ಷ್ಮವಲಯ

11:13 AM Oct 09, 2017 | |

ರಾಮನಗರ: “ಶೋಲೆ’ ಸಿನಿಮಾ ಮೂಲಕ ಖ್ಯಾತಿಗೆ ಬಂದ ಶ್ರೀ ರಾಮದೇವರ ಬೆಟ್ಟಕ್ಕೆ ಪೌರಾಣಿಕ ಇತಿಹಾಸವಿದೆ ಜತೆಗೆ ರಣಹದ್ದುಗಳ ವನ್ಯಜೀವಿಧಾಮ ಎಂಬ ಹೆಗ್ಗಳಿಕೆಯೂ ಇದೆ. ಈ ಬೆಟ್ಟವನ್ನು ರಾಜ್ಯ ಸರ್ಕಾರ ಕೆಲವು ವರ್ಷಗಳ ಹಿಂದೆ ಶ್ರೀರಾಮದೇವರ ಬೆಟ್ಟ ರಣಹದ್ದು ವನ್ಯಜೀವಿ ಧಾಮವೆಂದು ಘೋಷಿಸಿದೆ. ಆದರೆ ಬೆರಳೆಣಿಕೆಯಷ್ಟು ಇರುವ ಹದ್ದುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿರುವುದು ಪಕ್ಷಿಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

Advertisement

ಪರಿಸರ ಸೂಕ್ಷ್ಮವಲಯ ಘೋಷಣೆ: ದಕ್ಷಿಣ ಭಾರತದಲ್ಲಿರುವ ಏಕೈಕ ರಣಹದ್ದುಗಳ ವನ್ಯಧಾಮವಾದ “ಶ್ರೀರಾಮದೇವರಬೆಟ್ಟ ರಣಹದ್ದುಗಳ ವನ್ಯಜೀವಿಧಾಮ’ವನ್ನು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮವಲಯವೆಂದು ಗೆಜೆಟ್‌ ಮೂಲಕ ಘೋಷಿಸಿದೆ. ಬೆಟ್ಟದ ಅಂಚಿನಿಂದ ಸುತ್ತಮುತ್ತ 1.80 ಕಿ.ಮೀ. ವ್ಯಾಪ್ತಿಯಲ್ಲಿ (ಹರೀಸಂದ್ರ, ವಡೇರಹಳ್ಳಿ, ಮಾದಾಪುರ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಬಸನವಪುರ, ಹಳ್ಳಿಮಾಳ ಗ್ರಾಮಗಳ ಕೆಲವು ಭಾಗಗಳು, ಬೆಂಗಳೂರು ಮೈಸೂರು ಹೆದ್ದಾರಿಯ ಕೆಲವು ಭಾಗ ಸೂಕ್ಷ್ಮ ವಲಯಕ್ಕೆ ಒಳಪಟ್ಟಿದೆ) ಪರಿಸರ ಸೂಕ್ತ ವಲಯ ವಿಸ್ತರಿಸಲಾಗಿದೆ. ಎಕರೆ ವಿಸ್ತೀರ್ಣದ ಈ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ (ವೈಜ್ಞಾನಿಕ ಹೆಸರು ಜಿಪ್ಸ್‌ ಇಂಡಿಕಸ್‌) ವಾಸಸ್ಥಾನವಾಗಿದೆ. ಕೇವಲ 8 -10 ಸಂಖ್ಯೆಯಲ್ಲಿರುವ ಉದ್ದಕೊಕ್ಕಿನ ರಣಹದ್ದುಗಳನ್ನು ರಕ್ಷಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಈ ಪ್ರದೇಶವನ್ನು ವನ್ಯಜೀವಿಧಾಮವನ್ನಾಗಿ, ಕೇಂದ್ರ ಸರ್ಕಾರ ಇದನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಿದೆ.

ಒಂದೆರೆಡು ದಶಕದ ಹಿಂದೆ ಇಲ್ಲಿ ನೂರಾರು ರಣಹದ್ದುಗಳಿದ್ದವು. ಆದರೀಗ ಇಲ್ಲಿ 8 ರಿಂದ 10 ಉದ್ದಕೊಕ್ಕಿನ ರಣಹದ್ದುಗಳಿವೆ. ಡೈಕ್ಲೋಫೆನಾಕ್‌ ಎಂಬ ಔಷಧ ಸೇವಿಸಿದ ಜಾನುವಾರುಗಳು ಮೃತಪಟ್ಟಾಗ ಅವುಗಳ ಮಾಂಸವನ್ನು ರಣಹದ್ದುಗಳು ಸೇವಿಸುವುದರಿಂದ ಇವುಗಳ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಳಿವಿನಂಚಿನಲ್ಲಿರುವ ರಣಹದ್ದುಗಳಿಗೆ ಸೂಕ್ತ ಆಹಾರ ಕೂಡ ನೀಡಿ ರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

3 ವರ್ಷಗಳಲ್ಲಿ ಒಂದೇ ಮರಿ: ಉದ್ದಕೊಕ್ಕಿನ ರಣಹದ್ದುಗಳು 3 ವರ್ಷದ ಹಿಂದೆ ಒಂದು ಮರಿಗೆ ಮಾತ್ರ ಜನ್ಮ ನೀಡಿದೆ ಎಂದು ಇಲ್ಲಿನ ಫಾರೆಸ್ಟ್‌ ಗಾರ್ಡ್‌ ಆಗಿರುವ ಗುರುಲಿಂಗಯ್ಯ ತಿಳಿಸಿದ್ದಾರೆ. ಶ್ರೀ ರಾಮ ದೇವರ ಬೆಟ್ಟದ ಕಲ್ಲುಗಳು ವಿಶ್ವದಲ್ಲಿ “ಕ್ಲೋಸ್‌ ಪೇಟೆ
ಗ್ರಾನೈಟ್‌” ಎಂದೇ ಚಿರಪರಿಚಿತ. ಈ ಬೆಟ್ಟ ಅನೇಕ  ಸೂಕ್ಷ್ಮ ಜೀವಿಗಳ ವಾಸಸ್ಥಾನವೂ ಹೌದು. ಇಲ್ಲಿ ಉದ್ದ ಕೊಕ್ಕಿನ ರಣಹದ್ದುಗಳ ಜತೆ ಈಜಿಪಿಯನ್‌ ವಲ್ಚರ್‌ (ಕುಂಬಾರ್‌ ಕೋಳಿ)ಸೇರಿ 100ಕ್ಕೂ ಹೆಚ್ಚು ಜಾತಿಯ ಪಕ್ಷಿ ಸಂಕುಲಗಳನ್ನು ಅರಣ್ಯ ಇಲಾಖೆ ಗುರುತಿಸಿದೆ.

ಬಿ.ವಿ.ಸೂರ್ಯಪ್ರಕಾಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next