ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಗೆ ಲ್ಯಾಬ್ ಪರಿಕರ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಸ್ನಾತಕೋತ್ತರ ಕೇಂದ್ರದ ಮಷಿನ್ ಡಿಸೈನ್ ವಿಭಾಗದ ಪ್ರಾಧ್ಯಾಪಕ ಪ್ರೊ.ಯೋಗಾನಂದ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಜತೆಗೆ ಆಗಿನ ರೆಸಿಡೆಂಟ್ ಎಂಜಿನಿಯರ್ ಶಾಂತಪ್ಪ, ಕುಲಸಚಿವ ಹಾಗೂ ಹಣಕಾಸು ಅಧಿಕಾರಿಯಾಗಿದ್ದ ಕೆ.ವಿ. ಪ್ರಕಾಶ ಹಾಗೂ ಉಪ ಕುಲಪತಿಯಾಗಿದ್ದ ಡಾ.ಮಹೇಶಪ್ಪ ವಿರುದ್ಧವೂ ಸಿಸಿಬಿ ಪೊಲೀಸರು ದೂರು ದಾಖಲಿಸಿ ವಿಚಾರಣೆಗೊಳಪಡಿಸಿದ್ದಾರೆ.
2015ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕಾಲೇಜುಗಳಲ್ಲಿ ಲ್ಯಾಬ್ ಪರಿಕರಗಳ ಖರೀದಿಗಾಗಿ ಟೆಂಡರ್ ಕರೆದು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಕೋ ಆರ್ಡಿನೇಟರ್ ಆಗಿದ್ದ ಯೋಗಾನಂದ್ ಪರಿಕರಗಳನ್ನು ದಾವಣಗೆರೆ ವಿಟಿಯು ಉಗ್ರಾಣದಲ್ಲಿರಿಸಿದ್ದು, ಬಳಿಕ ಎಲ್ಲ ಕಡೆ ಪರಿಕರ ಅಳವಡಿಸಲಾಗಿದೆ ಎಂದು ಪ್ರಮಾಣ ಪತ್ರ ನೀಡಿರುವುದು ತಿಳಿದು
ಬಂದಿದೆ. ಇದನ್ನು ಪರಿಗಣಿಸಿ ಮೊದಲ ಹಂತದ ಹಣ ಬಿಡುಗಡೆಯಾಗಿದೆ.
ಏತನ್ಮಧ್ಯೆ ರಾಜ್ಯಪಾಲರಿಗೆ ಅನೇಕ ದೂರು ಬಂದಿರುವ ಹಿನ್ನೆಲೆ ಸಮಿತಿ ರಚಿಸಿ ಕಾರ್ಯಾಚರಣೆ ನಡೆಸಿದಾಗ ಅಪರಾಧ
ಪತ್ತೆಯಾಗಿದೆ. ಬಳಿಕ ದೂರಿನನ್ವಯ ಸಿಸಿಬಿ ಪೊಲೀಸರು ಯೋಗಾನಂದ ಅವರನ್ನು ಕರೆಸಿ ವಿಚಾರಿಸಿದಾಗ ಅಪರಾಧ ಸಾಬೀತಾಗಿದ್ದು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.