ಬೆಂಗಳೂರು : ಎಂಜಿನಿಯರಿಂಗ್ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ನಾಲ್ಕಕ್ಕಿಂತ ಹೆಚ್ಚಿನ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪಾಲನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಎಂಜಿನಿಯರಿಂಗ್ ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಶೈಕ್ಷಣಿಕ ಭವಿಷ್ಯ ಹಾಳಾಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ. ನಾಲ್ಕಕ್ಕಿಂತ ಹೆಚ್ಚಿನ ವಿಷಯಗಳನ್ನು ಬ್ಯಾಕ್‌ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ವಿಟಿಯು 5ನೇ ಸೆಮಿಸ್ಟರ್‌ಗೆ ಪ್ರವೇಶ ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ವಿದ್ಯಾರ್ಥಿಗಳಿಂದ ಶುಲ್ಕ ಪಾವತಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಜತೆಗೆ ಫಲಿತಾಂಶವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಉಲ್ಲೇಖೀಸಿದೆ. ಆದರೆ, ವಿಟಿಯು ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಕೋರ್ಟ್ ಆದೇಶದ ಕುರಿತು ಕಾಲೇಜಿಗೆ ಮಾಹಿತಿ ನೀಡಿದರೆ, ವಿಟಿಯುನಿಂದ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಪರೀಕ್ಷೆಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ವಿಟಿಯು ಅವರನ್ನು ಕೇಳಿದರೆ, ಕ್ಯಾರಿ ಓವರ್ ಪದ್ಧತಿ ಪ್ರಕಾರ 4 ವಿಷಯಗಳಿಗಿಂತ ಹೆಚ್ಚಿಗೆ ಉಳಿಸಿಕೊಂಡಿರುವವರಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಹೈಕೋರ್ಟ್ ತೀರ್ಪನ್ನು ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ. ಪರೀಕ್ಷೆ ಬರೆಯಲು ಅವಕಾಶ ನೀಡದೇ ಇದ್ದರೆ ನಮ್ಮ ಶೈಕ್ಷಣಿಕ ಭವಿಷ್ಯ ಹಾಳಾಗಲಿದೆ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡರು.
ವಿಟಿಯು 5ನೇ ಸೆಮಿಸ್ಟರ್ ಪರೀಕ್ಷೆಗಳು ಡಿ.3ರಿಂದ ಆರಂಭವಾಗಲಿದೆ. ವಿದ್ಯಾರ್ಥಿಗಳು ಚಲನ್ ಡೌನ್‌ಲೋಡ್ ಮಾಡಿ ಶುಲ್ಕ ಪಾವತಿಸಿದ್ದಾರೆ. ಆದರೆ, ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ವಿದ್ಯಾರ್ಥಿಗಳಾದ ಪವನ್, ಗಿರೀಶ್ ಮೊದಲಾದವರು ನೋವು ಹೇಳಿಕೊಂಡರು.