Advertisement

ನೆಲಮಂಗಲಕ್ಕೆ ವೃಷಭಾವತಿ ನೀರು

12:20 PM Dec 09, 2018 | Team Udayavani |

ಬೆಂಗಳೂರು: ನಗರದಲ್ಲಿ ಹರಿಯುವ ವೃಷಭಾವತಿ ನದಿ ನೀರನ್ನು ಸಂಸ್ಕರಿಸಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಕೆರೆಗಳನ್ನು ತುಂಬಿಸಲು ಉದ್ದೇಶಿಸಿದ್ದು, ಈ ಸಂಬಂಧ ತಿಂಗಳಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ರೂಪಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

Advertisement

ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರಿಗೆ ಋಣಮುಕ್ತ ಪತ್ರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ಕೆ.ಸಿ. ವ್ಯಾಲಿಯಿಂದ ಹೊಸಕೋಟೆ ಹಾಗೂ ಹೆಬ್ಟಾಳದಿಂದ ದೇವನಹಳ್ಳಿ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಅಡಿ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ವಂಚಿತವಾಗಿವೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಮತ್ತು ಸಂಸದರೊಂದಿಗೆ ಚರ್ಚಿಸಿ, ವೃಷಭಾವತಿಯ ತ್ಯಾಜ್ಯನೀರನ್ನು ಸಂಸ್ಕರಿಸಿ ಈ ವಂಚಿತ ತಾಲ್ಲುಕುಗಳ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ತಿಂಗಳಾಂತ್ಯದಲ್ಲಿ ಈ ಸಂಬಂಧದ ಸಮಗ್ರ ಯೋಜನಾ ವರದಿಯನ್ನು ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಲಾಗುವುದು. ವರ್ಷಾಂತ್ಯಕ್ಕೆ ಆ ನೀರನ್ನು ಎರಡೂ ತಾಲ್ಲೂಕುಗಳಿಗೆ ಹರಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದರು. 

ಪ್ರಸ್ತುತ ಈ ವೃಷಭಾವತಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಆ ನೀರನ್ನು ತ್ಯಾಜ್ಯನೀರು ಸಂಸ್ಕರಣಾ ಘಟಕದಿಂದ ಶುದ್ಧೀಕರಿಸಿ, ನೀರಾವರಿಗೆ ಬಳಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದರು. ಮಹತ್ವಾಕಾಂಕ್ಷಿ “ಋಣಮುಕ್ತ ಪತ್ರ ಪ್ರದಾನ ಯೋಜನೆ’ಗೆ ಅಧಿಕೃತ ಚಾಲನೆ ನೀಡಲು ದೊಡ್ಡಬಳ್ಳಾಪುರವನ್ನು ಆಯ್ಕೆ ಮಾಡಿಕೊಂಡಿದ್ದು ಅತ್ಯಂತ ಖುಷಿ ತಂದಿದೆ.

ಈ ಮೂಲಕ ಉದ್ದೇಶಿತ ತಾಲ್ಲೂಕು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 17,347 ರೈತರು ಸಹಕಾರಿ ಸಂಘಗಳಿಂದ ಸಾಲ ಪಡೆದಿದ್ದು, ಈ ಯೋಜನೆಯಿಂದಾಗಿ ಸುಮಾರು 83.89 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಅವರೆಲ್ಲರಿಗೂ ಹಂತ-ಹಂತವಾಗಿ ಋಣಮುಕ್ತ ಪತ್ರ ವಿತರಣೆ ಆಗಲಿದೆ ಎಂದು ಹೇಳಿದರು. 

Advertisement

ತಿಂಗಳಿಗೊಮ್ಮೆ ಗ್ರಾ.ಪಂ ಠಿಕಾಣಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತಿ ಹಳ್ಳಿಗಳಿಗೆ ನದಿಮೂಲದ ನೀರು ಪೂರೈಸಲು ಸರ್ಕಾರ ಯೋಜನೆ ರೂಪಿಸಿದೆ. ರೈತರಿಗೆ ತಂತ್ರಜ್ಞಾನ ಮತ್ತಿತರ ಮಾಹಿತಿ ನೀಡಲು, ನೀರಿನ ಸದ್ಬಳಕೆ, ಕೃಷಿ ಪದ್ಧತಿಗಳಲ್ಲಿ ಬದಲಾವಣೆ ಸೇರಿದಂತೆ ಹಲವಾರು ಅಂಶಗಳ ಬಗ್ಗೆ ರೈತರೊಂದಿಗೆ ಚರ್ಚಿಸಲು ಸ್ವತಃ ನಾವು ಪ್ರತಿ ತಿಂಗಳು ತಲಾ ಒಂದು ಗ್ರಾಮ ಪಂಚಾಯ್ತಿಗೆ ಬಂದು ಕೂರಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು. 

ಇದೇ ವೇಳೆ ಶಾಸಕ ಟಿ. ವೆಂಕಟರಮಣಯ್ಯ, ನಗರದಲ್ಲಿ ರಸ್ತೆ ವಿಸ್ತರಣೆ, ನಗರದ ಅಭಿವೃದ್ಧಿಗೆ ಹತ್ತು ಕೋಟಿ ರೂ ಅನುದಾನ, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಮನವಿ ಸಲ್ಲಿಸಿದರು. ಇಡೀ ರಾಜ್ಯದ ಗಮನ ಸೆಳೆದಿದ್ದ ರೈತರ ಬೆಳೆ ಸಾಲ ಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಣೆ ಸಮಾರಂಭಕ್ಕೆ ಜನಸಾಗರವೇ ಹರಿದುಬಂತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಆಗಮಿಸಿದ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳ ಮುಖಂಡರ ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದವು.

ಡಿಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ: ಎತ್ತಿನಹೊಳೆ ಯೋಜನೆಗೆ ಅಗತ್ಯವಿರುವ ಭೂಮಿಗೆ ಪರಿಹಾರ ಕಲ್ಪಿಸಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಋಣಮುಕ್ತ ಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎತ್ತಿನಹೊಳೆ ಯೋಜನೆಗೆ ಬೆಂಗಳೂರು ಗ್ರಾಮಾಂತರದಲ್ಲಿ 2,250 ಎಕರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡೂವರೆ ಸಾವಿರ ಎಕರೆ ಜಮೀನು ಮುಳುಗಡೆ ಆಗಲಿದೆ. ಈ ಭೂಮಿಗೆ ಪರಿಹಾರ ಹೆಚ್ಚು ಕೊಡಿಸುವ ಬಗ್ಗೆ ಸಾಕಷ್ಟು ಒತ್ತಡ ಇದೆ. ಆದ್ದರಿಂದ ತುಮಕೂರು ಜಿಲ್ಲೆಯವರಾದ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲೇ ಉದ್ದೇಶಿತ ಮುಳುಗಡೆ ಭೂಮಿಯ ಬೆಲೆ ನಿಗದಿಗೆ ಸಮಿತಿ ರಚನೆ ಆಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next