Advertisement

ಪೇಜಾವರ ಶ್ರೀ ವಿಶ್ವೇಶತೀರ್ಥರ ವೃಂದಾವನ ಪ್ರತಿಷ್ಠೆ

01:17 AM Dec 18, 2020 | mahesh |

ಬೆಂಗಳೂರು/ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಮಹಾಸಮಾರಾಧನೋತ್ಸವದ ಹಿನ್ನೆಲೆಯಲ್ಲಿ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಗುರುವಾರ ಸ್ವಾಮೀಜಿ ಅವರ ಮೂಲ ವೃಂದಾವನ ಪ್ರತಿಷ್ಠಾಪನೆ ಕೈಂಕರ್ಯ ನಡೆಯಿತು. ಶ್ರೀಪಾದರ ಸಮಾಧಿ ಸ್ಥಳದಲ್ಲೇ ಈ ವಿಶಿಷ್ಟವಾದ ವೃಂದಾವನ ಪ್ರತಿಷ್ಠಾಪನೆ ಮಾಡಲಾಯಿತು.

Advertisement

ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳ ನೇತೃತ್ವಲ್ಲಿ ಬೆಳಗ್ಗಿನಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಶ್ರೀಗಳು ನಿರ್ಯಾಣರಾದ ಬಳಿಕ ಅವರ ಭೌತಿಕ ಶರೀರವನ್ನು ಸಮಾಧಿ ಮಾಡಿದ ಸ್ಥಳದ ಮೇಲ್ಭಾಗದಲ್ಲಿ ವರ್ಷದ ಕಾರ್ಯಕ್ರಮ ನಡೆಯುವಾಗ ಶಿಲಾ ವೃಂದಾವನ ನಿರ್ಮಿಸಿ ಪ್ರತಿಷ್ಠೆ ಮಾಡುವುದು ಸಂಪ್ರದಾಯ. ಅದರಂತೆ ಪೂರ್ಣ ಪ್ರಮಾಣದ ವೃಂದಾವನ ಪ್ರತಿಷ್ಠಾಪನೆ ಮಾಡಲಾಯಿತು.

ಸಮೀಪದಲ್ಲಿ ಗುರುಗಳ ವೃಂದಾವನ ಪೇಜಾವರ ಶ್ರೀಗಳ ಇಚ್ಛೆಯಂತೆಯೇ ಅವರ ವೃಂದಾವನದ ಪಕ್ಕದಲ್ಲಿಯೇ ಶ್ರೀ ವಿಶ್ವೇಶತೀರ್ಥರಿಗೆ ವಿದ್ಯಾದಾನ ಮಾಡಿದ ಭಂಡಾರಕೇರಿ- ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಗಳ ಮೃತ್ತಿಕಾ ವೃಂದಾವನವನ್ನು ಕೂಡ ನಿರ್ಮಿಸಿ ಪ್ರತಿಷ್ಠಾಪನೆ ನಡೆಸಲಾಯಿತು.

ಈ ಬಗ್ಗೆ ವಿದ್ಯಾಪೀಠದ ಪ್ರಾಂಶುಪಾಲ ಡಾ| ಸತ್ಯನಾರಾಯಣ ಆಚಾರ್ಯರು ಪ್ರತಿಕ್ರಿಯೆ ನೀಡಿ, ಪೇಜಾವರ ಶ್ರೀಗಳು ತಾವು ಶರೀರ ತ್ಯಾಗ ಮಾಡುವುದಕ್ಕಿಂತ ಮೊದಲು ತಮ್ಮ ಈ ವಿದ್ಯಾ ಸಂಸ್ಥೆಯಲ್ಲಿಯೇ ತಮ್ಮ ಸನ್ನಿಧಾನ ಇರಬೇಕು. ಅದರ ಪಕ್ಕದಲ್ಲೇ ತಮಗೆ ಅಧ್ಯಾತ್ಮ ಬೋಧನೆ ಮಾಡಿದ ಗುರು ಶ್ರೀವಿದ್ಯಾಮಾನ್ಯತೀರ್ಥರ ಅವರ ವೃಂದಾವನ ಕೂಡ ಇರಬೇಕು ಎಂದು ಶಿಷ್ಯ ವೃಂದಕ್ಕೆ ಆದೇಶ ನೀಡಿದ್ದರು. ಆ ಹಿನ್ನೆಲೆಯಲ್ಲಿ ಈ ಕಾರ್ಯ ನಡೆದಿದೆ ಎಂದರು.

Advertisement

ಉಮಾಭಾರತಿ ಅವರಿಂದ ಸ್ಮರಣೆ
ಧನುರ್ಮಾಸವಾದ ಕಾರಣ ಬೆಳಗ್ಗೆ ಬೇಗ ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೃಂದಾವನದ ಪ್ರತಿಷ್ಠೆ ನಡೆಯಿತು. ಪಲಿಮಾರು ಮೂಲಮಠದ ಆವರಣದಲ್ಲಿರುವ ಶ್ರೀ ವಿದ್ಯಾಮಾನ್ಯತೀರ್ಥರ ವೃಂದಾವನದಿಂದ ಮೃತ್ತಿಕೆಯನ್ನು ತಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠಾಪಿಸಿದರು. ನಿತ್ಯ ಆನ್‌ಲೈನ್‌ ಗೋಷ್ಠಿಗಳು ನಡೆಯುತ್ತಿದ್ದು ಬುಧವಾರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು ಸಂಸ್ಮರಣೆ ನಡೆಸಿದರು. ಗುರುವಾರ ಸ್ವಾಮೀಜಿಯವರ ಶಿಷ್ಯೆ, ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರು ಆನ್‌ಲೈನ್‌ ಕಾರ್ಯಕ್ರಮದಲ್ಲಿ ಸಂಸ್ಮರಣೆ ನಡೆಸಿದರು. ವಿಶ್ವ ಹಿಂದೂ ಪರಿಷತ್‌ ಮುಂದಾಳು ಗೋಪಾಲ್‌, ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಭೇಟಿ ನೀಡಿ ಪ್ರಸಾದವನ್ನು ಸ್ವೀಕರಿಸಿದರು. ಶುಕ್ರವಾರ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ವೃಂದಾವನ ಪ್ರತಿಷ್ಠಾ ಕಾರ್ಯಕ್ಕೆ ಅಸಂಖ್ಯಾತ ಭಕ್ತಗಣ ಪಾಲ್ಗೊಳ್ಳುವ ಸಾಧ್ಯತೆ ಇತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಶ್ರೀಗಳ ಮಹಾ ಸಮಾರಾಧನ ಮಹೋತ್ಸವದಲ್ಲಿ ಸಾರ್ವಜನಿಕ ಭಾಗವಹಿಸಲು ಮತ್ತು ಮಠಕ್ಕೆ ಭೇಟಿ ನೀಡಲು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಈ ಕಾರಣದಿಂದಾಗಿ ಫೇಸ್‌ಬುಕ್‌, ಯುಟ್ಯೂಬ್‌ ಹಾಗೂ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪೂರ್ಣ ಪ್ರಜ್ಞ ವಿದ್ಯಾಪ್ರತಿಷ್ಠಾನ/ ವಿಶ್ವೇಶ ವಾಣಿ ಪೇಸ್‌ಬುಕ್‌ ಪುಟದ ಮೂಲಕ ಹಲವು ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮ ವೀಕ್ಷಿಸಿದರು.

ಕೊರಗ ಸಮುದಾಯದ ಮನೆಗಳಿಗೆ ವಿದ್ಯುತ್‌
ಉಡುಪಿ ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೆಬಲ್‌ ಟ್ರಸ್ಟ್‌ ನವರು ಮಂಚಿ ವಾರ್ಡ್‌ನಲ್ಲಿರುವ ವಿದ್ಯುತ್‌ ಸಂಪರ್ಕವಿಲ್ಲದ ಕೊರಗ ಸಮುದಾಯದವರ ಮೂರು ಮನೆಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿಕೊಟ್ಟರು. ಉಡುಪಿ ಶ್ರೀಕೃಷ್ಣ ಮಠ, ಪೇಜಾವರ ಮಠ, ಶ್ರೀ ವಿಶ್ವೇಶತೀರ್ಥರ ಸಂಪರ್ಕದ ವಿದ್ಯಾ ಸಂಸ್ಥೆಗಳು, ಸಂಘ-ಸಂಸ್ಥೆಗಳು ವಿವಿಧ ರೀತಿ ಗಳಲ್ಲಿ ಆರಾಧನೋತ್ಸವ ನಡೆಸಿದವು.

Advertisement

Udayavani is now on Telegram. Click here to join our channel and stay updated with the latest news.

Next