ಗಂಗಾವತಿ: ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ್ದ ದುಷ್ಕರ್ಮಿಗಳನ್ನು ಮೂರೇ ದಿನಗಳಲ್ಲಿ ಪತ್ತೆ ಹಚ್ಚಿರುವ ಗಂಗಾವತಿ ಪೊಲೀಸರು ಆಂಧ್ರದ ಬುಕ್ಕಾ ಶ್ರೀರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ ಸೇರಿ ಐವರನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ವಿಶೇಷ ತನಿಖಾ ತಂಡ ಶೋಧ ನಡೆಸಿದೆ.
ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ವಲಯ ಪೊಲೀಸ್ ಮಹಾನಿರ್ದೇಶಕ ಎಂ.ನಂಜುಡಸ್ವಾಮಿ, ಐತಿಹಾಸಿಕ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿರುವ 9 ಯತಿಗಳ ಪೈಕಿ ವ್ಯಾಸರಾಜರ ವೃಂದಾವನ ಒಂದಾಗಿದ್ದು, ನಿಧಿ ಆಸೆಗಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಪತ್ರಿ ನಗರದ ನಿವಾಸಿಗಳಾದ ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ (33), ಡಿ. ಮನೋಹರ ಡೆರಂಗಲು (27), ಕೆ.ಕುಮ್ಮಟಕೇಶವ (29), ಬಿ.ವಿಜಯಕುಮಾರ ಬೊಡ್ಡುಪಲ್ಲಿ (36), ಟಿ.ಬಾಲನರಸಯ್ಯ (42) ಹಾಗೂ ಇನ್ನಿಬ್ಬರು ಸೇರಿ ವೃಂದಾವನವನ್ನು ಧ್ವಂಸ ಮಾಡಿದ್ದರು. ಪ್ರಕರಣವನ್ನು ಬೇ ಧಿಸಿ ಆರೋಪಿಗಳನ್ನು ಬಂ ಧಿಸಿದ 5 ವಿಶೇಷ ತನಿಖಾ ತಂಡದ 46 ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದರು.
ಜನಪದ ಕಥೆಯಲ್ಲಿ ಹೇಳಿರುವಂತೆ ಆನೆಗೊಂದಿ-ನವವೃಂದಾವನ ಗಡ್ಡಿಯಲ್ಲಿರುವ ವ್ಯಾಸರಾಜರ ವೃಂದಾವನದಲ್ಲಿ ವಜ್ರ ವೈಢೂರ್ಯ, ಬಂಗಾರ ಇದೆ ಎಂದು ತಾಡಪತ್ರಿಯಲ್ಲಿರುವ ಬುಕ್ಕಾ ಶ್ರೀರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ ನಿಧಿ ಶೋಧಕರಿಗೆ ಹೇಳಿದ್ದಾರೆ. ಅರ್ಚಕನ ಮಾತಿನಂತೆ ಜುಲೈನಲ್ಲಿ ಮೂರು ಬಾರಿ ನವವೃಂದಾವನಕ್ಕೆ ಆಗಮಿಸಿ, ದುಷ್ಕರ್ಮಿಗಳು ಸ್ಥಳ ಪರಿಶೀಲಿಸಿ, ವೃಂದಾವನ ತೆರವು ಮಾಡಲು ವಿಫಲ ಯತ್ನ ನಡೆಸಿದ್ದಾರೆ.
ಜು.17ರಂದು ಕಡೆಬಾಗಿಲು ಸೇತುವೆ ಕಡೆಯಿಂದ ನವವೃಂದಾವನಕ್ಕೆ ರಾತ್ರಿ ಅರ್ಚಕ ಟಿ.ಬಾಲನರಸಯ್ಯ ಸೇರಿ 7 ಜನ ಆಗಮಿಸಿ ಮೊದಲು ವೃಂದಾವನ ಹಾಗೂ ಇಲ್ಲಿರುವ ಆಂಜನೇಯ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ವೃಂದಾವನದ ಮೇಲಿನ ಕಲ್ಲುಗಳನ್ನು ಕೆಡವಿ ಸುಮಾರು 3 ಅಡಿ ಅಗೆದಾಗ ದೊಡ್ಡ ಬಂಡೆ ಬಂದಿರುವುದರಿಂದ ಅಲ್ಲಿಗೆ ಅಗೆಯುವ ಕೆಲಸ ನಿಲ್ಲಿಸಿ ತಾಡಪತ್ರಿಗೆ ಮರಳಿರುವುದಾಗಿ ತನಿಖೆ ಸಂದರ್ಭದಲ್ಲಿ ಆರೋಪಿತರು ತಿಳಿಸಿದ್ದಾರೆ.
ಈ ಹಿಂದೆ ನಿಧಿ ಶೋಧ ನಡೆಸಿದ ವಿವರ ಸಂಗ್ರಹ ಹಾಗೂ ಇವರ ಮೊಬೈಲ್ ಟವರ್ ಚಲನವಲನ ಪತ್ತೆ ಮಾಡಿ ದುಷ್ಕಮಿಗಳನ್ನು ಪೊಲೀಸರು ಬಂಧಿಸಿದ್ದು, ಇವರಿಗೆ ಸ್ಥಳೀಯರ ಸಹಕಾರ ಕುರಿತು ತನಿಖೆ ಮುಂದುವರಿದಿದೆ. ಕೃತಕ್ಕೆ ಬಳಸಿದ ವಸ್ತು ಹಾಗೂ ಒಂದು ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.