ಮುಂಬಯಿ: ಮಾತೃ ಭಾಷೆಯ ಬಗ್ಗೆ ಅಭಿಮಾನ-ಅನನ್ಯತೆ, ಹಿರಿತನ-ಸಿರಿತನ, ಪ್ರೀತಿ-ವಾತ್ಸಲ್ಯ, ಗೌರವವನ್ನು ಕನ್ನಡಾಭಿಮಾನಿಗಳು ಬೆಳೆಸಿಕೊಂಡು ಬಹುಮುಖದೆಡೆಗೆ ಸಾಗುವುದೇ ಕನ್ನಡಿಗರ ಕರ್ತವ್ಯವಾಗಬೇಕು. ಮಾತೃ ಭಾಷೆಯಿಂದಲೇ ವ್ಯಕ್ತಿತ್ವ ವಿಕಸನದೊಂದಿಗೆ ಸರ್ವಾಂಗೀಣ ವಿಕಾಸ ಎಂಬುದನ್ನು ಮರೆಯಬಾರದು. ಮನುಷ್ಯನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಧೈರ್ಯ, ಸ್ಥೈರ್ಯ, ಆತ್ಮ ವಿಶ್ವಾಸದಂತಹ ಶಸ್ತ್ರಾಸ್ತ್ರಗಳು ಬೇಕು. ನಮ್ಮಲ್ಲಿರುವ ಪ್ರತಿಭೆಯ ಪ್ರಬುದ್ಧತೆಯನ್ನು ವಿಕಾಸ ಮಾಡಿಕೊಳ್ಳಲು ಗುರು-ಹಿರಿಯರ, ವೇದಿಕೆಗಳ, ಮಾರ್ಗದರ್ಶನದ ಆವಶ್ಯಕತೆಯಿದೆ. ಆತ್ಮಶಕ್ತಿಯನ್ನು ಸದಾ ಮನೋಶಕ್ತಿಯ ಮೂಲಕ ಪರೀಕ್ಷೆಗೆ ಗುರಿಪಡಿಸಿದಾಗ ವಿಚಾರ ಶಕ್ತಿ ಬೆಳೆದು ನಿರರ್ಗಳವಾಗಿ ಬದುಕುವ ಕಲೆ ಕರಗತವಾಗುತ್ತದೆ ಎಂದು ಸಾಹಿತಿ ಡಾ| ಕರುಣಾಕರ ಎನ್. ಶೆಟ್ಟಿ ಅವರು ನುಡಿದರು.
ಮುಲುಂಡ್ ವಿಪಿಎಂ ಕನ್ನಡ ಶಾಲೆಯಲ್ಲಿ ಇತ್ತೀಚೆಗೆ ನಡೆದ ಅಂತರ್‌ಶಾಲಾ ಪ್ರತಿಭಾಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸೋಲೇ ಗೆಲುವಿನ ಮೂಲ, ಇಂದು ಭಾಗವಹಿಸು, ಮುಂದೆ ಜಯಶಾಲಿಯಾಗು ಎನ್ನುವ ತತ್ವದಿಂದ ಛಲ, ಉತ್ಸಾಹ, ಉಲ್ಲಾಸಗಳ ಭಾವನೆಯನ್ನು ನಾನ್ಯಾರೆಂಬುದರ ಸ್ವ-ಚಿಂತನೆಗಳು ಬೆಳೆಯುತ್ತವೆ.
ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಭಾಷೆಯ, ಮಾತನಾಡುವ, ವಿಷಯ ಪ್ರಸ್ತುತಪಡಿಸುವಿಕೆಯ, ಸ್ಪರ್ಧಾ ಜಗತ್ತಿನ ತಿಳಿವಳಿಕೆಯ, ಸ್ವ-ಸಾಮರ್ಥ್ಯದ ಅರಿವಾಗುತ್ತದೆ ಎಂದು ನುಡಿದು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಅತಿಥಿ-ಗಣ್ಯರನ್ನು ಗೌರವಿಸಿ ಮಾತನಾಡಿ, ಜೀವನದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಲು ಹಿಂದೆ ಗುರು-ಮುಂದೆ ಗುರಿ ಇರಬೇಕು. ಶಿಕ್ಷಕರಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಯ ಭವ್ಯವಾದ ಭವಿಷ್ಯ ನಿರ್ಮಾಣವಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವವನೆಯನ್ನು ಬೆಳೆಸಿಕೊಳ್ಳಬೇಕು. ಹೊರನಾಡಿನಲ್ಲಿ ತಾಯಿ ಭುವನೇಶ್ವರಿಯ ಹೊಂಗಿರಣವನ್ನು ಹೊರಹೊಮ್ಮಿಸಲು ಪ್ರಯತ್ನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾ ಪ್ರಸಾರಕ ಮಂಡಳವು ಮುಂಬಯಿಯ ವಿವಿಧ ನಗರಗಳಿಂದ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ಮತ್ತು ಎಲ್ಲಾ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡುತ್ತಿದೆ ಎಂದು ನುಡಿದರು.
ಕಾರ್ಯಕ್ರಮವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಬಿ. ಎಚ್. ಕಟ್ಟಿ, ಮುಖ್ಯ ಶಿಕ್ಷಕಿ ಸುವಿನಾ ಗಟ್ಟಿ ಮತ್ತು ಅರುಣಾ ಭಟ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪರಿವೀಕ್ಷಕರು, ಶಿಕ್ಷಕರು, ಶಿಕ್ಷಕೇತರ ಸಿಬಂದಿ, ಪಾಲಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಅಶ್ವಿನಿ ಬಂಗೇರ ಅವರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಗೌರಿ ದೇಶಪಾಂಡೆ, ಶಿಕ್ಷಕ ಅಂಬಾಜೇಪ್ಪ ಕಾಟಗಾಂವ್ ಅವರು ತೀರ್ಪುಗಾರರನ್ನು ಪರಿಚಯಿಸಿದರು.
ವಿಜೇತ ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ಸುನಿತಾ ಮಠ ಅವರು ಘೋಷಿಸಿದರು. ತೀರ್ಪುಗಾರರಾದ ಗಿರೀಶ್ ಸಾರವಾಡ ಮಾತನಾಡಿ ಶುಭ ಹಾರೈಸಿದರು. ಶಿಕ್ಷಕ ಚಂದ್ರಶೇಖರ ಬನ್ನಿಮಠ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.