ವಿಧಾನಮಂಡಲ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ನಂತರ ಅನರ್ಹತೆ ಶಿಕ್ಷೆಗೊಳಗಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, “ಸಚಿವ ರಾಗಿಯೇ ಸದನಕ್ಕೆ ಕಾಲಿಡುತ್ತೇವೆ’ ಎಂದು ಶಪಥಗೈದಿ ದ್ದವರು ಕೊನೆಗೂ ತಮ್ಮ ಬಯಕೆ ಈಡೇರಿಸಿಕೊಂಡರು.
ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಶ್ರೀಮಂತ ಪಾಟೀಲ ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಉಲ್ಲಸಿತರಾಗಿದ್ದರು.
ರಾಜ್ಯಪಾಲರ ಭಾಷಣ ಆರಂಭವಾಗುವುದಕ್ಕೆ ಮುಂಚೆ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ ಅವರು ಸದನಕ್ಕೆ ಆಗಮಿಸಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ಬಳಿ ಬಂದು, ಕುಶಲೋಪರಿ ವಿಚಾರಿಸಿದರು. ಬಿ.ಸಿ.ಪಾಟೀಲ ಅವರು ಸಿದ್ದರಾಮಯ್ಯನವರ ಬಳಿ ಬಂದು ಆರೋಗ್ಯ ವಿಚಾರಿಸಿದರು. ಬೈರತಿ ಬಸವರಾಜ್ ಕೈ ಮುಗಿದು ನಮಸ್ಕರಿಸಿದರೆ, ಗೋಪಾಲಯ್ಯ, ನಾರಾ ಯಣಗೌಡ ಸಮೀಪಕ್ಕೆ ತೆರಳಿ ಆತ್ಮೀಯ ವಾಗಿ ಮಾತನಾಡಿದರು.
ಶಿವರಾಮ್ ಹೆಬ್ಟಾರ್ ಅವರು ಆರ್.ವಿ.ದೇಶಪಾಂಡೆ ಅವರ ಕಾಲಿಗೆ ನಮಸ್ಕರಿಸಿದರು. ಎಸ್.ಟಿ.ಸೋಮಶೇಖರ್ ಅವರು ಡಿ.ಕೆ.ಶಿವಕುಮಾರ್ ಬಳಿ ಬಂದು ಕೈ ಕುಲುಕಿದಾಗ, ಬೆನ್ನು ತಟ್ಟಿ ಆಲಿಂಗಿಸಿಕೊಂಡಿದ್ದು ವಿಶೇಷ. ನೂತನ ಸಚಿವರನ್ನು ಅಭಿನಂದಿಸಿದ ಕಾಂಗ್ರೆಸ್-ಜೆಡಿಎಸ್ ಶಾಸಕರು, “ಹೆಂಗೋ ಮಿನಿಸ್ಟ್ರೆ ಆದ್ರಿ ಬಿಡ್ರಪ್ಪಾ’ ಎಂದು ಚಟಾಕಿ ಹಾರಿಸಿ, ಕೈ ಕುಲುಕಿ, ಶುಭ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಳ್ಳಾರಿಯ ಶಾಸಕರು ಆನಂದ್‌ಸಿಂಗ್, ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗದ ಶಾಸಕರು ರಮೇಶ್ ಜಾರಕಿಹೊಳಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಶಾಸಕರು ಬಿ.ಸಿ.ಪಾಟೀಲ, ಬೆಂಗಳೂರು ಭಾಗದ ಶಾಸಕರು ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಅವರ ಜತೆ ಸಮಾಲೋಚನೆಯಲ್ಲಿ ತೊಡಗಿದ್ದರು. ಬಿ.ಸಿ.ಪಾಟೀಲ ಅವರು ಹಸಿರು ಶಾಲು ಸಮೇತವೇ ಸದನಕ್ಕೆ ಆಗಮಿಸಿದ್ದು ವಿಶೇಷ. ಜಂಟಿ ಅಧಿವೇಶನವಾದ್ದರಿಂದ ಉಭಯ ಸದನಗಳ ಸದಸ್ಯರು ಒಂದೇ ಕಡೆ ಇದ್ದು, ನೂತನ ಸಚಿವರು ಎಲ್ಲರ ಬಳಿ ತೆರಳಿ ಮಾತನಾಡುತ್ತಿದ್ದರು.