ದೇವನಹಳ್ಳಿ: ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡಿರುವ ರೈತರಿಗೆ ಸಾಗುವಳಿ ಪತ್ರ ನೀಡಲಾಗಿದೆ. ರೈತರು ಭೂಮಿ ಮಾರಾಟ ಮಾಡದೆ ಭವಿಷ್ಯದಲ್ಲಿ ತಮ್ಮ ಮಕ್ಕಳ ಭವಿಷ್ಯಕ್ಕೆ ಉಳಿಸಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಸೂಲಕುಂಟೆ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ರೈತರಿಗೆ ಸಾಗುವಳಿ ಮತ್ತು ನಿವೇಶನದ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ರೈತರಿಗೆ ಸಾಗುವಳಿ ಪತ್ರ ನೀಡಲಾಗಿದ್ದು, ಕೊಳವೆ ಭಾವಿ ಕೊರೆಸಿ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಸಹಕಾರ ಸಂಘಗಳು ದಾಖಲೆ ಪತ್ರವಿಲ್ಲದೆ ಸಾಲ ನೀಡುವುದಿಲ್ಲ. ಮೈತ್ರಿ ಸರ್ಕಾರದ ಆಡಳಿತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅರ್ಹರನ್ನು ಗುರುತಿಸಿ, ಹಕ್ಕು ಪತ್ರ ನೀಡುವಂತೆ ಸೂಚಿಸಿದ್ದರು. 94 ಸಿ ಮತ್ತು 94 ಸಿಸಿ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರವನ್ನು ನೀಡಿ, ಸಕ್ರಮಗೊಳಿಸಲಾಗಿದೆ. ಹಲವು ವರ್ಷಗಳಿಂದ ನಿವೇಶದ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದವರಿಗೆ ವಿತರಿಸಲಾಗುತ್ತಿದೆ. ಮನೆ ಬಾಗಿಲಿಗೆ ಹಕ್ಕು ಪತ್ರಗಳನ್ನು ತಲುಪಿಸುವ ಕಾರ್ಯವಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಕೇಶವ ಮೂರ್ತಿ ಮಾತನಾಡಿ, ಹಲವು ವರ್ಷಗಳಿಂದ ಹಕ್ಕುಪತ್ರ ನೀಡದೆ ನನೆಗುದಿಗೆ ಬಿದ್ದಿತ್ತು. ಈಗ ಶಾಸಕರೊಂದಿಗೆ ಸಮಾಲೋಚಿಸಿ ರೈತರಿಗೆ ಮತ್ತು ಬಡ ಜನರಿಗೆ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಲಾಗುತ್ತಿದೆ. ಪೌತಿ ಖಾತೆಗಳನ್ನು ರೈತರು ಮತ್ತು ಜನರು ಸಮೀಪದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನೀಲಗಿರಿ ಮರಗಳು ಇರುವುದರಿಂದ ಅಂರ್ತಜಲ ಕುಸಿಯುತ್ತಿದೆ. ಅದಕ್ಕಾಗಿ ಕುಡಲೇ ತೆರವು ಗೊಳಿಸುವ ಕಾರ್ಯ ಮಾಡಬೇಕು. ಜಿಲ್ಲಾಧಿಕಾರಿಗಳು ಈಗಾಗಲೇ ನೀಲಗಿರಿ ಮರಗಳ ತೆರವು ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ಹೇಳಿದರು. ಜಿಪಂ ಸದಸ್ಯ ಕೆ.ಸಿ ಮಂಜುನಾಥ್ ಮಾತನಾಡಿ, ಹಕ್ಕು ಪತ್ರ ನೀಡಲಾಗಿದ್ದು, ಎಷ್ಟೇ ಕಷ್ಟ ಬಂದರೂ ಜಮೀನ ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ವಿಜಯ ಸ್ವಾಮಿ, ಉಪಾಧ್ಯಕ್ಷ ಮಾರುತಿ, ಸದಸ್ಯರಾದ ಕೆ.ವಿ. ಸ್ವಾಮಿ, ಬಿ.ಕೆ.ನಾರಾಯಣ ಸ್ವಾಮಿ, ಆನಂದ್, ಮಾರುತಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಮುನೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ರಾಜಸ್ವ ನಿರೀಕ್ಷಕ ರಮೇಶ್, ತಾಲೂಕು ಸೊಸೈಟಿ ಅಧ್ಯಕ್ಷ ಶ್ರೀರಾಮಯ್ಯ, ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಚನ್ನರಾಯ ಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ವಿ.ಮುನಿರಾಜು, ಬಾಲಕೃಷ್ಣ, ನಂಜೇಗೌಡ, ರಾಮಣ್ಣ, ಗೋವಿಂದ್ ಸ್ವಾಮಿ, ಪಟಾಲಪ್ಪ, ದೇವರಾಜ್, ರಂಗಸ್ವಾಮಿ, ಇದ್ದರು.