Advertisement

“ಉತ್ತರಾರ್ಧ’ದಲ್ಲಿ ಇಂದು ಮತದಾನ

11:18 PM Apr 22, 2019 | Lakshmi GovindaRaju |

ಬೆಂಗಳೂರು: ದೇಶದ 17ನೇ ಲೋಕಸಭೆಗೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಏ.23) ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

Advertisement

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. 28,022 ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 2.03 ಲಕ್ಷ ಸಿಬ್ಬಂದಿ ಈ ಮತದಾನ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮತದಾನದ ಸಿದ್ಧತೆಗಳ ವಿವರ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಶಾಂತಿಯುತ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು, ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪ್ರತಿಯೊಬ್ಬ ಅರ್ಹ ಮತದಾರ ಮುಕ್ತವಾಗಿ ತನ್ನ ಹಕ್ಕು ಚಲಾಯಿಸಬೇಕು. ಆ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವುದು ಚುನಾವಣಾ ಆಯೋಗದ ಆಶಯ ಎಂದರು.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1.22 ಕೋಟಿ ಪುರುಷರು, 1.20 ಕೋಟಿ ಮಹಿಳೆಯರು, 2,022 ಇತರರು ಸೇರಿ ಒಟ್ಟು 2.43 ಕೋಟಿ ಮತದಾರರಿದ್ದಾರೆ.

Advertisement

ಇದರಲ್ಲಿ 18 ಮತ್ತು 19 ವರ್ಷದ 5.41 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. ಈ ಪೈಕಿ 3.05 ಲಕ್ಷ ಪುರುಷರು, 2.35 ಲಕ್ಷ ಮಹಿಳೆಯರಿದ್ದಾರೆ. ಅಲ್ಲದೇ ಈ 14 ಕ್ಷೇತ್ರಗಳಲ್ಲಿ 7.93 ಲಕ್ಷ ಪುರುಷರು ಹಾಗೂ 6.39 ಲಕ್ಷ ಮಹಿಳೆಯರು ಸೇರಿ 18 ಮತ್ತು 21 ವರ್ಷದ 14.33 ಲಕ್ಷ ಯುವ ಮತದಾರರಿದ್ದಾರೆ.

ಒಟ್ಟು 14 ಕ್ಷೇತ್ರಗಳಲ್ಲಿ ಅತಿ ಹೆಚ್ಚು 57 ಅಭ್ಯರ್ಥಿಗಳಿರುವ ಬೆಳಗಾವಿ ಕ್ಷೇತ್ರದಲ್ಲಿ 4 ಬ್ಯಾಲೆಟ್‌ ಯೂನಿಟ್‌ಗಳು ಮತ್ತು 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಬೀದರ್‌, ಧಾರವಾಡ, ದಾವಣಗೆರೆ ಕ್ಷೇತ್ರಗಳಲ್ಲಿ ತಲಾ 2 ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಸಲಾಗುತ್ತಿದೆ.

ಒಟ್ಟಾರೆ 28,022 ಮತಗಟ್ಟೆಗಳಲ್ಲಿ 48,394 ಬ್ಯಾಲೆಟ್‌ ಯೂನಿಟ್‌, 33,626 ಕಂಟ್ರೋಲ್‌ ಯೂನಿಟ್‌, 35,028 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಎಂ-2 ಇವಿಎಂಗಳನ್ನು ಬಳಸಲಾಗುತ್ತಿದೆ.

ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ ಕ್ಷೇತ್ರಗಳು ಎಸ್ಸಿ ಮೀಸಲು ಕ್ಷೇತ್ರಗಳಾಗಿದ್ದು, ಉಳಿದಂತೆ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್‌, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಸಾಮಾನ್ಯ ಕ್ಷೇತ್ರಗಳಾಗಿವೆ.

5,605 ಸೂಕ್ಷ್ಮ ಮತಗಟ್ಟೆಗಳು: ಉ.ಕ. ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿನ ಒಟ್ಟು 28,022 ಮತಗಟ್ಟೆಗಳ ಪೈಕಿ 5,605 ಮತಗಟ್ಟೆಗಳನ್ನು ಸಮಸ್ಯಾತ್ಮಕ (ಸೂಕ್ಷ್ಮ) ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಇದರಲ್ಲಿ 1,026 ಮತಗಟ್ಟೆಗಳಲ್ಲಿ ಹೆಚ್ಚುವರಿ ಕೇಂದ್ರ ಶಸಸ್ತ್ರ ಮೀಸಲು ಪಡೆ ನಿಯೋಜಿಸಲಾಗುತ್ತಿದೆ. 2,174 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗುತ್ತದೆ. 1,479 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಮರಾ ಅಳವಡಿಸಲಾಗುತ್ತದೆ, 1,952 ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ಮಾಡಲಾಗುತ್ತದೆ.

ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಪ್ರಚಾರದ ವೇಳೆ ವಶಪಡಿಸಿಕೊಳ್ಳಲಾದ ಅಕ್ರಮ ಹಣ, ಹೆಂಡದ ಪ್ರಮಾಣ, ಮತದಾನದ ವೇಳೆ ನಡೆದ ಘರ್ಷಣೆ, ಚುನಾವಣಾ ನೀತಿ ಸಂಹಿತೆ ಪ್ರಕರಣಗಳು ಹೆಚ್ಚು ದಾಖಲಾಗಿರುವ ಹಿನ್ನೆಲೆ ಆಧರಿಸಿ ಸಮಸ್ಯಾತ್ಮಕ ಮತಗಟ್ಟೆಗಳನ್ನು ಗುರುತಿಸಲಾಗುತ್ತದೆ.

ಅದರಂತೆ ಮಂಗಳವಾರ ಮತದಾನ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 5,605 ಸಮಸ್ಯಾತ್ಮಕ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಆಯೋಗ ಕೈಗೊಂಡಿದೆ.

30 ಸಾವಿರ ಪೊಲೀಸ್‌ ಸಿಬ್ಬಂದಿ: ಭದ್ರತೆಗೆ 34,548 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 1.43 ಲಕ್ಷ ಮತದಾನ ಸಿಬ್ಬಂದಿ, 5,407 ಸಾರಿಗೆ ಸಿಬ್ಬಂದಿ, 20 ಸಾವಿರ ಇತರೆ ಸಿಬ್ಬಂದಿ ಸೇರಿ ಮತದಾನ ಪ್ರಕ್ರಿಯೆಗೆ ಒಟ್ಟು 2.03 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಿವಮೊಗ್ಗದ ಮೇಲೆ ವಿಶೇಷ ನಿಗಾ: ಅತಿ ಹೆಚ್ಚು ಅಕ್ರಮ ಹಣ ಪತ್ತೆಯಾಗಿರುವ ಶಿವಮೊಗ್ಗ ಕ್ಷೇತ್ರದ ಮೇಲೆ ಚುನಾವಣಾ ಆಯೋಗ ವಿಶೇಷ ನಿಗಾ ಇಟ್ಟಿದೆ. ಚುನಾವಣಾ ಅಧಿಸೂಚನೆ ಪ್ರಕಟವಾದ ದಿನದಿಂದ ಏ.21ರವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು 8.70 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಅಕ್ರಮ ಜಪ್ತಿಯ ಮೊತ್ತ 10.41 ಕೋಟಿ ರೂ. ಆಗಿದೆ.

ಅಲ್ಲದೇ ಶಿವಮೊಗ್ಗದಲ್ಲಿ ಮತದಾರರಿಗೆ ಹಣ ಹಂಚಿಕೆಯ 22 ಪ್ರಕರಣಗಳು ದಾಖಲಾಗಿದ್ದು, 2 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯು ಅತಿ ಹೆಚ್ಚು 1,188 ಪ್ರಕರಣಗಳನ್ನು ಇದೇ ಕ್ಷೇತ್ರದಲ್ಲಿ ದಾಖಲಿಸಿದೆ. ಅಕ್ರಮ ಹಣ ಜಪ್ತಿಯ ಅತಿ ಹೆಚ್ಚು 90 ಪ್ರಕರಣಗಳು ಇಲ್ಲೇ ದಾಖಲಾಗಿವೆ.

ಲೋಕ ಸಮರದಲ್ಲಿ 237 ಅಭ್ಯರ್ಥಿಗಳು: 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಬೆಳಗಾವಿಯಲ್ಲಿ ಅತಿ ಹೆಚ್ಚು 57 ಅಭ್ಯರ್ಥಿಗಳಿದ್ದರೆ, ಅತೀ ಕಡಿಮೆ 5 ಅಭ್ಯರ್ಥಿಗಳು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿದ್ದಾರೆ.

ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ 216 ಸಖೀ, ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ 7 ಸಾಂಪ್ರದಾಯಿಕ ಮತಗಟ್ಟೆ ಹಾಗೂ ಸಂಪೂರ್ಣ ವಿಲಕಚೇತನರು ನಿರ್ವಹಿಸುವ 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೀದರ್‌ನಲ್ಲಿ ಅತಿ ಹೆಚ್ಚು 30 ಸಖೀ ಮತಗಟ್ಟೆಗಳಿವೆ.

ಶಿವಮೊಗ್ಗದಲ್ಲಿ 3 ಮತ್ತು ಉತ್ತರ ಕನ್ನಡದಲ್ಲಿ 4 ಸಾಂಪ್ರದಾಯಿಕ ಮತಗಟ್ಟೆಗಳು, ಕಲಬುರಗಿಯಲ್ಲಿ ವಿಕಲಚೇತನರು ನಿರ್ವಹಿಸುವ ಅತಿ ಹೆಚ್ಚು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಒಟ್ಟು ಇವಿಎಂ ಬಳಕೆ
ಬ್ಯಾಲೆಟ್‌ ಯೂನಿಟ್‌: 48,394
ಕಂಟ್ರೋಲ್‌ ಯೂನಿಟ್‌: 33,626
ವಿವಿಪ್ಯಾಟ್‌: 35,028

ಅತಿ ಹೆಚ್ಚು ಅಭ್ಯರ್ಥಿಗಳು
ಬೆಳಗಾವಿ-57

ಅತಿ ಕಡಿಮೆ ಅಭ್ಯರ್ಥಿಗಳು
ರಾಯಚೂರು-05

ಅತಿ ಹೆಚ್ಚು ಮತದಾರರು
ಕಲಬುರಗಿ (ಎಸ್ಸಿ)- 19.45 ಲಕ್ಷ
ಅತಿ ಕಡಿಮೆ ಮತದಾರರು
ಚಿಕ್ಕೋಡಿ- 16.04 ಲಕ್ಷ

ಅತಿ ಹೆಚ್ಚು ಮೊದಲ ಬಾರಿಯ ಮತದಾರರು
ಬಳ್ಳಾರಿ: 44,511

ಅತಿ ಕಡಿಮೆ ಮೊದಲ ಬಾರಿಯ ಮತದಾರರು
ವಿಜಯಪುರ- 34,630

ಅತಿ ಹೆಚ್ಚು ಯುವ ಮತದಾರರು
ಕೊಪ್ಪಳ: 1.23 ಲಕ್ಷ

ಅತಿ ಕಡಿಮೆ ಯುವ ಮತದಾರರು
ಚಿಕ್ಕೋಡಿ: 90,909

ಅತಿ ಹೆಚ್ಚು ಮತಗಟ್ಟೆ
ರಾಯಚೂರು-2,187

ಅತಿ ಕಡಿಮೆ ಮತಗಟ್ಟೆ
ಧಾರವಾಡ- 1,872

ಕ್ಷೇತ್ರಗಳು ಒಟ್ಟು ಅಭ್ಯರ್ಥಿಗಳು ಒಟ್ಟು ಮತದಾರರು ಒಟ್ಟು ಮತಗಟ್ಟೆ 2014 ಶೇ. ಮತದಾನ
ಚಿಕ್ಕೋಡಿ- 11 16.04 ಲಕ್ಷ 1,885 ಶೇ.74.29
ಬೆಳಗಾವಿ- 57 17.71 ಲಕ್ಷ 2,064 ಶೇ.68.25
ಬಾಗಲಕೋಟೆ- 14 17.00 ಲಕ್ಷ 1,938 ಶೇ.68.81
ವಿಜಯಪುರ (ಎಸ್ಸಿ)- 12 17.95 ಲಕ್ಷ 2,101 ಶೇ.59.58
ಕಲಬುರಗಿ (ಎಸ್ಸಿ)- 12 19.45 ಲಕ್ಷ 2,157 ಶೇ.57.96
ರಾಯಚೂರು (ಎಸ್ಟಿ)- 05 19.27 ಲಕ್ಷ 2,184 ಶೇ.58.32
ಬೀದರ್‌- 22 17.73 ಲಕ್ಷ 1,999 ಶೇ.60.16
ಕೊಪ್ಪಳ- 14 17.36 ಲಕ್ಷ 2,033 ಶೇ.65.63
ಬಳ್ಳಾರಿ (ಎಸ್ಟಿ)- 11 17.51 ಲಕ್ಷ 1,925 ಶೇ.70.29
ಹಾವೇರಿ- 10 17.06 ಲಕ್ಷ 1,972 ಶೇ.71.62
ಧಾರವಾಡ- 19 17.25 ಲಕ್ಷ 1,872 ಶೇ.65.99
ಉತ್ತರ ಕನ್ನಡ- 13 15.52 ಲಕ್ಷ 1,922 ಶೇ.69.04
ದಾವಣಗೆರೆ- 25 16.34 ಲಕ್ಷ 1,949 ಶೇ.73.23
ಶಿವಮೊಗ್ಗ- 12 16.75 ಲಕ್ಷ 2,021 ಶೇ.72.36

Advertisement

Udayavani is now on Telegram. Click here to join our channel and stay updated with the latest news.

Next