Advertisement

ಅರ್ಹರ ಆಯ್ಕೆಗೆ ಮತದಾನ ಅನಿವಾರ್ಯ: ರಮೇಶ್‌

01:25 PM Aug 02, 2017 | Team Udayavani |

ದಾವಣಗೆರೆ: ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಭಾರತ ಸುಭದ್ರ, ಬಲಿಷ್ಠ ರಾಷ್ಟ್ರವಾಗಬೇಕಾದರೆ, ಪ್ರತಿ ಅರ್ಹ ವ್ಯಕ್ತಿಯೂ ಚುನಾವಣೆಗಳಲ್ಲಿ ಮತದಾನದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮನವಿ ಮಾಡಿದ್ದಾರೆ.

Advertisement

ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯುವ ಮತದಾರರ ಅರಿವು ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 82 ಕೋಟಿಯಷ್ಟು ನೋಂದಾಯಿತ ಮತದಾರರನ್ನು ಹೊಂದಿರುವ ಬಹುದೊಡ್ಡ ರಾಷ್ಟ್ರ ಭಾರತ. ಆದರೆ, ಇತ್ತೀಚಿನ ದಿನಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಗೊಳ್ಳುವ ವಿಷಯ ಎಂದರು.

ಸಂವಿಧಾನ ನಮಗೆ ನೀಡಿರುವ ಪವಿತ್ರ ಮತದಾನದ ಹಕ್ಕು ಚಲಾಯಿಸುವ ಮೂಲಕ ನಮ್ಮ ಪ್ರತಿನಿಧಿಯನ್ನು ನಾವೇ ನಿರ್ಧರಿಸುವ ಒಂದು ವಿಶೇಷ ಅಧಿಕಾರ ನಮಗಿದೆ. ಹಾಗಾಗಿ ಎಲ್ಲ ಅರ್ಹ ವಯಸ್ಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಹಾಗೂ ಎಲ್ಲ ಚುನಾವಣೆಗಳಲ್ಲಿ ಕಡ್ಡಾಯ ಮತದಾನ ಮಾಡಬೇಕಿದೆ ಎಂದು ತಿಳಿಸಿದರು.

ನಾವು ನಮ್ಮ ಜವಾಬ್ದಾರಿ ಅರಿತು ಮತದಾನ ಮಾಡದಿದ್ದರೆ ಅನರ್ಹರನ್ನು ಆಯ್ಕೆಗೆ ಅವಕಾಶವಾಗಲಿದೆ. ಅನರ್ಹರನ್ನು ನೋಡಿಕೊಂಡು 5 ವರ್ಷ ಕೊರಗಬೇಕಾಗುತ್ತದೆ.  ಬಹುಶಃ ಅರ್ಹರನ್ನು ಹೇಗೆ ಗುರುತಿಸಬಹುದೆಂಬ ಗೊಂದಲ ಹಲವರಲ್ಲಿದೆ. ಇರುವವರಲ್ಲೇ ಉತ್ತಮರನ್ನು ಆಯ್ಕೆ ಮಾಡಬೇಕಿದೆ ಎಂದರು. ಯಾವುದೇ ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೆ ಮತದಾನ ಮಾಡಬೇಕು. ವಿದ್ಯಾರ್ಥಿಗಳು, ತಮ್ಮ ಕುಟುಂಬದವರು, ಸ್ನೇಹಿತರು, ನೆರೆಹೊರೆಯ ಮತದಾರರ ನೋಂದಣಿ ಮಾಡಿಸಿ ಮತದಾನ ಮಾಡುವ ಕಾರ್ಯದಲ್ಲಿ ಅವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಸಮಾಜವನ್ನು ಸ್ವಸ್ಥ, ಸದೃಢ ಸ್ಥಿತಿಯಲ್ಲಿಡಲು ಶಿಕ್ಷಣ ಬಹಳ ಮುಖ್ಯ. ನಾವು ಪಡೆಯುತ್ತಿರುವ ಶಿಕ್ಷಣ ನಮಗೆ ದಾರಿದೀಪವಾಗಬೇಕು. ಸಮಾಜದಲ್ಲಿ ಬದುಕಲು ಹಲವಾರು ದಾರಿಗಳಿವೆ. ಆದರೆ, ನಮ್ಮ ದಾರಿ ಸ್ಪಷ್ಟವಾಗಿರಬೇಕು. ಸ್ಪಷ್ಟತೆಯಿಂದ ಆ ಗುರಿ ತಲುಪಬೇಕು ಎಂದು ತಿಳಿಸಿದರು. ಶಿಕ್ಷಣ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ, ನಮ್ಮ ಆಲೋಚನೆಗಳು ಮುಕ್ತ ಹಾಗೂ ಕ್ರಮಬದ್ಧವಾಗಿರಬೇಕು. ಶಿಕ್ಷಣ ಎಂಬುದು ಒಂದು ಹೂವಿದ್ದಂತೆ. ಒಂದು ಹೂ ಅರಳಿ ತನ್ನ ಸುತ್ತಲಿನವರನ್ನು ಹೇಗೆ ಆಕರ್ಷಿಸುತ್ತದೆಯೋ ಹಾಗೇ ಎಲ್ಲರನ್ನು ಆಕರ್ಷಿಸುವಂತಿರಬೇಕು. ನಮ್ಮ ಆಲೋಚನೆಗಳು
ಸರಿಯಿದ್ದರೆ ನಾವು ಸಾಗುವ ದಾರಿ ಕೂಡ ಸರಿ ಇರುತ್ತದೆ ಎಂದು ತಿಳಿಸಿದರು. ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಮತದಾರರ ನೋಂದಣಿ, ಮತದಾನದ ಪ್ರಾಮುಖ್ಯತೆ ಹಾಗೂ ಆನ್‌ಲೈನ್‌ನಲ್ಲಿ ನೋಂದಣಿ ಬಗ್ಗೆ ತಿಳಿಸಿದರು.

Advertisement

ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವನಗೌಡ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಇದ್ದರು. ಸಂವಾದದಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next