Advertisement

ದೊಡ್ಡ ಮತಗಟ್ಟೆಗೆ ಬಂದಿಲ್ಲ ವಿಭಜನೆ ಭಾಗ್ಯ!

12:59 PM Dec 06, 2019 | Team Udayavani |

ಶಿರಸಿ: ತಾಲೂಕಿನ ಅತಿದೊಡ್ಡ ಮತಗಟ್ಟೆಗಳ ಪೈಕಿ ಒಂದಾದ ದಾಸನಕೊಪ್ಪ ಬಳಿ ಕುಪ್ಪಗಡ್ಡೆ ಹೊಸಕೊಪ್ಪದ ಮತಗಟ್ಟೆಗೆ ಇನ್ನೂ ವಿಭಜನೆ ಭಾಗ್ಯ ಬಾರದೇ ಮತದಾರರು ಪರಿತಪಿಸುವ ಸಂದರ್ಭ ಎದುರಾಗಿದೆ. ಬಹುಕಾಲದಿಂದ ಮತಗಟ್ಟೆ ವಿಭಾಗಿಸಿ ಕೊಡುವಂತೆ ಸಾಕಷ್ಟು ಸಲ ಸಾರ್ವಜನಿಕರು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

Advertisement

ಯಲ್ಲಾಪುರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದಾಸನಕೊಪ್ಪ ಬನವಾಸಿ ಮಾರ್ಗದ ನಡುವೆ ಸಿಗುವ ಕುಪ್ಪಗಡ್ಡೆ ಮತಗಟ್ಟೆಯಲ್ಲಿ ಈ ಸಮಸ್ಯೆ ಪ್ರತೀ ಚುನಾವಣೆಯಲ್ಲೂ ಸಾಮಾನ್ಯ. ಮುಂಜಾನೆಯಿಂದಲೇ ಮತದಾರರು ಸರತಿಯಲ್ಲಿ ನಿಂತು ಮತದಾನ ಮಾಡುವುದು ಮಾಮೂಲಾಗಿದೆ. ಸಂಜೆ ತನಕವೂ ಮತಗಟ್ಟೆ ತುಂಬಿಯೇ ಇರುತ್ತಿದ್ದು, ಅಧಿಕಾರಿಗಳ ಕೊರತೆ, ಊಟಕ್ಕೆ ಹೋಗಲೂ ಆಗದಷ್ಟು ಒತ್ತಡಗಳು ಮುಂದುವರಿಯುತ್ತವೆ ಎಂದು ಮತದಾರರು ಅಲವತ್ತುಕೊಳ್ಳುವಂತೆ ಆಗಿದೆ. ಮತದಾನದ ವೇಳೆ ಮಹಿಳೆಯರು, ಅನಾರೋಗ್ಯ ಪೀಡಿತರು, ವೃದ್ಧರು ಕೂಡ ಮತದಾನ ಮಾಡಲು ಸರತಿಯಲ್ಲಿ ನಿಂತು ಮತದಾನಕ್ಕೆ ನಿಂತು ಹಕ್ಕು ಚಲಾಯಿಸುವುದು ಯಾಕಪ್ಪಾ ಬಂತು ಚುನಾವಣೆ ಎಂಬಂತಾಗಿದೆ.

ಕುಪ್ಪಗಡ್ಡೆ ಮತಗಟ್ಟೆ ಹೊಸಕೊಪ್ಪ ಶಾಲೆಯಲ್ಲಿ ನಡೆಯುತ್ತಿದೆ. ಕುಪ್ಪಗಡ್ಡೆ, ಹೊಸಕೊಪ್ಪ, ಮಡಕೇಶ್ವರ ಹಾಗೂ ಬೆಳ್ಳನಕೇರಿಯಲ್ಲಿ ಸುಮಾರು 1270ಕ್ಕೂ ಅಧಿಕ ಮತಗಳಿವೆ. ಅವರಲ್ಲಿ ಕೆಲವರು ಮುಂಜಾನೆ 6ಕ್ಕೇ ಬಂದು ಸರತಿಯಲ್ಲಿ ನಿಂತು ಕೃಷಿ ಕಾರ್ಯಕ್ಕೆ ತೆರಳಲು ಯೋಜಿಸಿದ್ದೂ ಇದೆ. ಮತಗಟ್ಟೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಡ ಒತ್ತಡ ನಿರ್ಮಾಣವಾಗಿತ್ತು. ರಾತ್ರಿ 7ರತನವೂ ಮತದಾನಕ್ಕೆ ಅವಕಾಶ ಮಾಡಿದ ಘಟನೆಗಳೂ ಇದೆ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕುಪ್ಪಗಡ್ಡೆ ಹಾಗೂ ದಾಸನಕೊಪ್ಪ ಬಿಡಕಿಬಯಲಿನ ಮತಗಟ್ಟೆ ವಿಭಾಗಿಸಿಕೊಡಬೇಕು.

ದಾಸನಕೊಪ್ಪದ ಬಿಡಕಿಬೈಲಿನ ಮತಘಟ್ಟೆಯಲ್ಲೂ ಒತ್ತಡ ನಿರ್ಮಾಣ ಇದ್ದು, ರಂಗಾಪುರ, ಕೋಟೆ, ಬಿಡಕಿಬೈಲು, ಬದನಗೋಡಿನ ಗ್ರಾಮಸ್ಥರೂ ಒಂದಾಗಿ ಮತದಾನ ಮಾಡುವಾಗ ಸಾವಿರ ಸಂಖ್ಯೆಗೂ ಅಧಿಕವಿದೆ. ಕಾರಣದಿಂದ ಒತ್ತಡ ನಿರ್ಮಾಣ ಆಗುತ್ತಿದೆ ಎಂದು ಉದಯವಾಣಿಗೆ ಸ್ಥಳೀಯರಾದ ಗಣಪತಿ ಗೌಡ ಕುಪ್ಪಗಡ್ಡೆ, ಅಹಮದ್‌ ಶರೀಪ ಶೇಖ್ ಇತರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next