ದೇಶದೆಲ್ಲೆಡೆ ಈಗ ಪ್ರಜಾಪ್ರಭುತ್ವದ ದೊಡ್ಡ ಹಬ್ಬದ ಆಚರಣೆ ನಡೆಯುತ್ತಿದೆ. ದೇಶದ 543 ಲೋಕಸಭಾ ಕ್ಷೇತ್ರಗಳ ಚುನಾವಣೆ ಪ್ರಕ್ರಿಯೆ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ 17 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಶುಕ್ರವಾರ 2ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ಒಟ್ಟು 88 ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರನಿಗೂ ತನ್ನ ಹಕ್ಕು ಚಲಾಯಿಸಲು 5 ವರ್ಷಕ್ಕೊಮ್ಮೆ ಅವಕಾಶ ಲಭ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅತ್ಯಮೂಲ್ಯವಾದದ್ದು.
ಅರ್ಹ ಯುವ ಮತದಾರರಿಂದ ಹಿಡಿದು ವಯೋವೃದ್ಧರವರೆಗೂ ಪ್ರತಿಯೊಬ್ಬ ಮತದಾರ ಈ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂಬುದು ಚುನಾವಣ ಆಯೋಗ, ರಾಜಕೀಯ ಪಕ್ಷಗಳ ಆಶಯ. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಆಯೋಗ ಮತದಾನ ಜಾಗೃತಿ ಅಭಿಯಾನ ನಡೆಸಿ ಮತದಾರರನ್ನು ಮತಗಟ್ಟೆಗೆ ಬರುವಂತೆ ಪ್ರೇರೇಪಿಸುತ್ತದೆ. ಮತದಾನದ ಮಹತ್ವ ಹಾಗೂ ಮೌಲ್ಯದ ಬಗ್ಗೆ ಅರಿವು ಮೂಡಿಸುತ್ತದೆ. ಆದರೆ ಈಗಿನ ಮತದಾನದ ಪ್ರಮಾಣ ಅತ್ಯಂತ ನೀರಸವಾಗಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.69.23ರಷ್ಟು ಮತದಾನವಾಗಿದ್ದರೆ, ಈಗ ನಡೆದ 14 ಕ್ಷೇತ್ರಗಳಲ್ಲಿ ಶೇ.68.96 ರಷ್ಟು ಮತದಾನ ಆಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಒಟ್ಟಾರೆ ಶೇಕಡವಾರು ಮತದಾನಕ್ಕೆ ಹೋಲಿಸಿದರೆ ಈ 14 ಕ್ಷೇತ್ರಗಳ ಮತದಾನ ಕೇವಲ 0.42 ರಷ್ಟು ಮಾತ್ರ ಹೆಚ್ಚಳವಾಗಿದೆ.ಅಂದರೆ ಬಹುತೇಕ ಕಳೆದ ಸಲ ಆಗಿದ್ದಷ್ಟೇ ಮತದಾನ ಆಗಿದೆ. ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಆಯೋಗ ಸಾಕಷ್ಟು ಜಾಗೃತಿ ಮೂಡಿಸಿದರೂ ಮತದಾರ ಮಾತ್ರ ಮನೆಬಿಟ್ಟು ಹೊರಗೆ ಬಂದಂತೆ ಕಾಣುತ್ತಿಲ್ಲ. ಮತ ಚಲಾವಣೆಗೆ ಏಕೆ ನಿರ್ಲಕ್ಷ್ಯ ಎಂಬುದು ತಿಳಿಯುತ್ತಿಲ್ಲ. ಅತ್ಯಂತ ಹಿರಿಯ ನಾಗರಿಕರು, ಅಂಗವಿಕಲರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು, ಕೆಲವರು ವಿದೇಶದಿಂದ ಬಂದು ಮತ ಚಲಾಯಿಸುವ ಮೂಲಕ ಇತರರಿಗೆ “ಮಾದರಿ’ ಆಗಿದ್ದಾರೆ. ಆದರೆ ದಿನಗಟ್ಟಲೆ/ಗಂಟೆಗಟ್ಟಲೆ ರಾಜಕೀಯ ಮಾತನಾಡುವ ಹಾಗೂ ಸರಕಾರಗಳ ಕಾರ್ಯವೈಖರಿ ಬಗ್ಗೆ ಸದಾ ಟೀಕಿಸುತ್ತ ಕಾಲ ಕಳೆಯುವ ಮಂದಿ ಮತಗಟ್ಟೆಗೆ ಬಾರದಿರುವುದೇ ಶೇಕಡಾವಾರು ಮತದಾನ ಇಳಿಕೆಗೆ ಕಾರಣ ಎನ್ನಲಾಗಿದೆ.
ಚುನಾವಣ ಆಯೋಗ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿ ಮತದಾನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಅಧಿಕಾರಿಗಳು, ಸಿಬಂದಿಗೆ ತರಬೇತಿ ನೀಡಿ ಮತದಾನ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಂಡಿರುತ್ತದೆ. ಮತದಾನಕ್ಕಾಗಿ ಸರಕಾರ ರಜೆ ಕೂಡ ಘೋಷಿಸಿರುತ್ತದೆ. ಇಡೀ ವ್ಯವಸ್ಥೆ ಮತದಾರ ಪ್ರಭುಗಳ ಆಗಮನಕ್ಕಾಗಿ ಕಾಯುತ್ತಿರುತ್ತದೆ, ಆದರೆ ಮತದಾರನೇ ಮತಗಟ್ಟೆ ಕಡೆ ಸುಳಿಯದೇ ಇದ್ದರೆ ಆ ಪ್ರಯತ್ನಗಳೆಲ್ಲವೂ ವ್ಯರ್ಥವೆಂದೇ ಹೇಳಬೇಕಾಗುತ್ತದೆ.
ಕೆಲವು ವಿದೇಶಗಳಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆದಿರುವ ಉದಾಹರಣೆಗಳಿವೆ. ಮತದಾನ ಪ್ರಮಾಣ ಹೆಚ್ಚಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಹೀಗಾಗಿ ಮತದಾನ ನಮ್ಮ ಹಕ್ಕು ಎಂಬ ಭಾವನೆ ಮತದಾರ ಪ್ರಭುಗಳಲ್ಲಿ ಇನ್ನೂ ಮೂಡಿಲ್ಲವೆಂದೇ ಹೇಳಬೇಕಾಗುತ್ತದೆ. ಕಡ್ಡಾಯ ಮತದಾನ ಮಾಡುವುದು ಸೂಕ್ತವೆಂಬುದರ ಬಗ್ಗೆ ಯೋಚಿಸುವ ದಿನಗಳು ಬಂದಿದೆ. ಏನೇ ಇರಲಿ ಮತದಾನದ ಬಗ್ಗೆ ಉದಾಸೀನದ ಧೋರಣೆ ಸರಿಯಲ್ಲ.