Advertisement

Ayodhya:‌ ಡಿ.29ರಂದು ಸುಂದರ ಬಾಲರಾಮನ ಮೂರ್ತಿ ಆಯ್ಕೆಗಾಗಿ ವೋಟಿಂಗ್, 3 ಮೂರ್ತಿಗಳು ಸಿದ್ಧ!

01:01 PM Dec 29, 2023 | Team Udayavani |

ಅಯೋಧ್ಯೆ(ಉತ್ತರಪ್ರದೇಶ): 2024ರ ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್‌ ಪ್ರಮಾಣದ ಸಿದ್ಧತೆಯ ನಡುವೆಯೇ ಶ್ರೀರಾಮಮಂದಿರದ ಗರ್ಭಗುಡಿಯೊಳಗೆ ಸ್ಥಾಪಿಸಲಾಗುವ ಭಗವಾನ್‌ ರಾಮ ಲಲ್ಲಾನ ಅತ್ಯುತ್ತಮ ವಿಗ್ರಹವನ್ನು ಶುಕ್ರವಾರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವೋಟಿಂಗ್‌ ಮೂಲಕ ಆಯ್ಕೆ ಮಾಡಲಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:INDvsSA; ಮೊದಲ ಪಂದ್ಯ ಸೋತ ಬಳಿಕ ವೇಗಿಯನ್ನು ಕರೆಸಿಕೊಂಡ ಟೀಂ ಇಂಡಿಯಾ

ಈಗಾಗಲೇ ರಾಮ ಲಲ್ಲಾನ ಮೂರು ಮೂರ್ತಿಗಳನ್ನು ಕೆತ್ತಲಾಗಿದ್ದು, ಮತದಾನ ಪ್ರಕ್ರಿಯೆ ಮೂಲಕ ಟ್ರಸ್ಟ್‌ ನ ಸದಸ್ಯರು ಅತ್ಯುತ್ತಮ ಒಂದು ಮೂರ್ತಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ವರದಿ ವಿವರಿಸಿದೆ.

ಮತದಾನ ಪ್ರಕ್ರಿಯೆ:

ಬಾಲರಾಮನ ಮೂರ್ತಿ ಕೆತ್ತನೆಯಲ್ಲಿ ಮೂವರು ನುರಿತ ಶಿಲ್ಪಿಗಳ ಶ್ರಮವಿವೆ. ಮೂವರು ಶಿಲ್ಪಿಗಳಲ್ಲಿ ಒಬ್ಬೊಬ್ಬರು ವಿಶಿಷ್ಠವಾಗಿ ಭಗವಾನ್‌ ಶ್ರೀರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದಾರೆ. ಇದರಲ್ಲಿ ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ ಕೂಡಾ ಒಬ್ಬರಾಗಿದ್ದಾರೆ. ಬೆಂಗಳೂರಿನ ಜಿ.ಎಲ್.ಭಟ್‌ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಸೇರಿದಂತೆ ಮೂವರು ಪ್ರಮುಖ ಶಿಲ್ಪಿಗಳಿದ್ದಾರೆ.

Advertisement

ಜನವರಿ 22ರಂದು ನಡೆಯಲಿರುವ ಅದ್ದೂರಿ ಉದ್ಘಾಟನಾ ಸಮಾರಂಭದಲ್ಲಿ ಅತೀ ಹೆಚ್ಚು ಮತ ಗಳಿಸುವ ವಿನ್ಯಾಸದ ರಾಮಲಲ್ಲಾನ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಟ್ರಸ್ಟ್‌ ತಿಳಿಸಿದೆ.

ಗರ್ಭಗುಡಿಯೊಳಗೆ 5 ವರ್ಷದ ರಾಮಲಲ್ಲಾ ಮೂರ್ತಿ ಸ್ಥಾಪನೆ:

ಮೂರು ವಿನ್ಯಾಸದ ವಿಗ್ರಹಗಳಲ್ಲಿ ಮುಗ್ದ ಬಾಲರಾಮನ ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಕಳೆದ ವಾರ ತಿಳಿಸಿದ್ದರು. ರಾಮಮಂದಿರದ ಗರ್ಭಗುಡಿಯೊಳಗೆ 51 ಇಂಚು ಎತ್ತರದ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು.

ಮೂರ್ತಿ ಕೆತ್ತನೆ ಸವಾಲಾಗಿತ್ತು: ಶಿಲ್ಪಿ ಅರುಣ್

ಬಾಲರಾಮನ ಮೂರ್ತಿ ಕೆತ್ತನೆ ಮಾಡುವುದು ದೊಡ್ಡ ಸವಾಲಾಗಿತ್ತು. ಯಾಕೆಂದರೆ ಶ್ರೀರಾಮನ ಬಾಲಕ ಸ್ವರೂಪವನ್ನು ನಾವು ನೋಡಿರಲಿಲ್ಲ. ಆದರೆ ಜನರ ಭಕ್ತಿಗೆ ಚ್ಯುತಿ ಬಾರದಂತೆ ಮೂರ್ತಿ ಕೆತ್ತನೆ ಮಾಡಬೇಕಿತ್ತು. ಆರು ತಿಂಗಳಲ್ಲಿ ಬಾಲರಾಮನ ಮೂರ್ತಿ ಕೆತ್ತನೆ ಪೂರ್ಣಗೊಳಿಸಿದ್ದು, ಇದು 51 ಇಂಚು ಎತ್ತರವಿದ್ದು, ಪ್ರತಿಮೆಯು ಪ್ರಭಾವಳಿ ಸೇರಿದಂತೆ ಎಂಟು ಅಡಿ ಎತ್ತರ, ಮೂರುವರೆ ಅಡಿ ಅಗಲ ಹೊಂದಿರುವುದಾಗಿ ಮೈಸೂರು ಜಿಲ್ಲೆಯ ಶಿಲ್ಪಿ ಅರುಣ್‌ ಯೋಗಿರಾಜ್‌ ತಿಳಿಸಿದ್ದರು.

ಏಳು ದಿನಗಳ ಸಂಭ್ರಮ:

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 16ರಿಂದ ಏಳು ದಿನಗಳ ಕಾಲ ಸರಣಿಯಾಗಿ ವಿವಿಧ ಪವಿತ್ರ ಕಾರ್ಯಗಳು ನಡೆಯಲಿದೆ. ಜನವರಿ 16ರಂದು ಪ್ರಾಯಶ್ಚಿತ್ತ ಸಮಾರಂಭ, ನಂತರ ದಶವಿಧ ಸ್ನಾನ, ವಿಷ್ಣು ಪೂಜೆ ಮತ್ತು ಸರಯೂ ನದಿ ದಡದಲ್ಲಿ ಗೋವುಗಳಿಗೆ ನೈವೇದ್ಯ ನೀಡುವ ಕಾರ್ಯಕ್ರಮ ನಡೆಯಲಿದೆ.

ಜನವರಿ 17: ಮಂಗಳ ಕಲಶದಲ್ಲಿ ಸರಯೂ ಜಲ ಹೊತ್ತ ಭಕ್ತರೊಂದಿಗೆ ಭಗವಾನ್‌ ರಾಮಲಲ್ಲಾ ಮೂರ್ತಿಯನ್ನು ಹೊತ್ತ ಮೆರವಣಿಗೆ ಅಯೋಧ್ಯೆ ತಲುಪಲಿದೆ.

ಜನವರಿ 18: ಔಪಚಾರಿಕವಾಗಿ ಗಣೇಶ ಅಂಬಿಕಾ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವಟು ಪೂಜೆ, ವಾಸ್ತು ಪೂಜೆ ನೆರವೇರಲಿದೆ.

ಜನವರಿ 19: ಪವಿತ್ರ ಅಗ್ನಿ ಬೆಳಗುವಿಕೆ, ನವಗ್ರಹ ಸ್ಥಾಪನೆ ಹಾಗೂ ಮಂದಿರದ ಸುತ್ತಲೂ ಹವನ ಪ್ರಜ್ವಲನ.

ಜನವರಿ 20: ಗರ್ಭಗುಡಿಯನ್ನು ಸರಯೂ ನದಿ ನೀರಿನಿಂದ ಸ್ವಚ್ಛಗೊಳಿಸುವುದು ನಂತರ ವಾಸ್ತು ಶಾಂತಿ ಮತ್ತು ಅನ್ನಾಧಿವಾಸ್‌ ಆಚರಣೆ ನಡೆಯಲಿದೆ.

ಜನವರಿ 21: ರಾಮ್‌ ಲಲ್ಲಾ ವಿಗ್ರಹಕ್ಕೆ 125 ಕಲಶಗಳಿಂದ ಸ್ನಾನ. ಇತರ ಔಪಚಾರಿಕ ಪೂಜೆ.

ಜನವರಿ 22: ನಿಗದಿಯಂತೆ ಬೆಳಗ್ಗಿನ ಪೂಜೆ, ಮಧ್ಯಾಹ್ನ ಮೃಗಶಿರಾ ನಕ್ಷತ್ರದ ಮುಹೂರ್ತದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next