Advertisement

“ವಿದ್ಯಾರ್ಥಿಗಳಲ್ಲಿ ಮತದಾನ ಮಹತ್ವದ ಅರಿವು ಮೂಡಿಸಿ’

10:16 PM Jun 07, 2019 | Sriram |

ಅಜೆಕಾರು: ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಭವಿಷ್ಯದ ಮತದಾರರಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಸಕ್ರಿಯವಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಸರಕಾರಿ ಹಿ. ಪ್ರಾ. ಶಾಲೆ ಜಾರ್ಕಳ ಮುಂಡ್ಲಿಯಲ್ಲಿ ನಡೆಯಿತು.

Advertisement

ಚುನಾವಣಾ ಪ್ರಕ್ರಿಯೆಗಳ ಪ್ರಾಯೋಗಿಕ ಕಲ್ಪನೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಚುನಾವಣಾ ಅಧಿಸೂಚನೆ, ಮತದಾರರ ವಿವರ, ನಾಮಪ್ರತ್ರಿಕೆ ಸಲ್ಲಿಕೆ, ಪರಿಶೀಲನೆ, ಹಿಂದೆಗೆತ, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಶಾಲೆಯಲ್ಲಿಯೇ ರಚಿಸಿದ ಆಯೋಗದಿಂದ ಚಿಹ್ನೆ ನೀಡಿಕೆ, ಮತ ಎಣಿಕೆ, ಫ‌ಲಿತಾಂಶ ಘೋಷಣೆ ನಡೆಸಲಾಯಿತು.

ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಚುನಾವಣೆಯಲ್ಲಿ ಭಾಗವಹಿಸಿ ದೇಶದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳನ್ನು ತಿಳಿದುಕೊಂಡರು.

ಮತದಾನ ಜಾಗೃತಿ ತಂಡ
ದೇಶದಾದ್ಯಂತ ನಡೆಯುವ ಚುನಾವಣಾ ಸಂದರ್ಭ ಮತದಾನ ಜಾಗೃತಿ ತಂಡ ಇರುವಂತೆಯೇ ಶಾಲಾ ಮಟ್ಟದಲ್ಲಿಯೂ ಮತದಾನ ಜಾಗೃತಿ ತಂಡ ರಚಿಸಲಾಗಿತ್ತು.

ಚುನಾವಣಾ ಅಧಿಕಾರಿಗಳು
ಶಾಲಾ ಸಂಸತ್‌ ಚುನಾವಣೆಯ ಮುಖ್ಯ ಚುನಾವಣಾ ಆಯುಕ್ತರಾಗಿ ಶಾಲೆಯ ಮುಖ್ಯ ಶಿಕ್ಷಕಿ ಮುಕ್ತಾ ನಾಯಕ್‌ ಕಾರ್ಯ ನಿರ್ವಹಿಸಿದರು.

Advertisement

ಚುನಾವಣಾ ಅಧಿಕಾರಿಗಳಾಗಿ ಸಹಶಿಕ್ಷಕರಾದ ಪ್ರತಿಭಾ, ಆಶಾ, ವಿಷ್ಣುಮೂರ್ತಿ ಬಲ್ಲಾಳ್‌, ಪ್ರಜ್ವಲ್‌ ಜೈನ್‌ ಕಾರ್ಯ ನಿರ್ವಹಿಸಿದರು.

ಮಾದರಿ ಕಾರ್ಯಕ್ರಮ
ಮಕ್ಕಳಿಗೆ ಬಾಲ್ಯದಲ್ಲಿಯೇ ಮತದಾನದ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯ. ಇದೊಂದು ಮಾದರಿ ಕಾರ್ಯಕ್ರಮ.
-ಯೋಗೀಶ್‌ ಕಿಣಿ,
ಸಮೂಹ ಸಂಪನ್ಮೂಲ ವ್ಯಕ್ತಿಗಳು

ಮತದಾನದ ಹಬ್ಬ
ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಾಲೆಯಲ್ಲಿ ಸಂಸತ್‌ ಚುನಾವಣೆ ನಡೆಸಿ ಮತದಾನದ ಹಬ್ಬ ಆಚರಿಸಲಾಗಿದೆ.
-ಮುಕ್ತಾ ನಾಯಕ್‌,
ಮುಖ್ಯ ಶಿಕ್ಷಕರು, ಮುಂಡ್ಲಿ ಸರಕಾರಿ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next