Advertisement

ಮತದಾನ ಶಾಂತಿಯುತ, ಫ‌ಲಿತಾಂಶದತ್ತ ಎಲ್ಲರ ಚಿತ್ತ

06:00 AM Nov 04, 2018 | Team Udayavani |

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಸೇರಿ ಐದು ಕ್ಷೇತ್ರಗಳ ಉಪ ಚುನಾವಣೆಗೆ ಶನಿವಾರ ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ.65.56ರಷ್ಟು ಮತದಾನವಾಗಿದೆ.

Advertisement

ಲೋಕಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ಕ್ಷೇತ್ರದಲ್ಲಿ ಅತಿ ಹೆಚ್ಚು, ಶೇ.61.05ರಷ್ಟು ಮತದಾನವಾಗಿದ್ದರೆ, ಮಂಡ್ಯ ಕ್ಷೇತ್ರದಲ್ಲಿ ಅತಿ ಕಡಿಮೆ, ಶೇ.53.93 ರಷ್ಟು ಮತದಾನವಾಗಿದೆ. ಉಳಿದಂತೆ ಬಳ್ಳಾರಿ ಕ್ಷೇತ್ರದಲ್ಲಿ ಶೇ.63.85 ರಷ್ಟು ಮತದಾನವಾಗಿದೆ. ವಿಧಾನಸಭಾ ಕ್ಷೇತ್ರಗಳ ಪೈಕಿ ರಾಮನಗರ ಕ್ಷೇತ್ರದಲ್ಲಿ ಅತಿ ಹೆಚ್ಚು, ಶೇ.71.88 ರಷ್ಟು ಮತದಾನವಾಗಿದ್ದರೆ, ಜಮಖಂಡಿ ಕ್ಷೇತ್ರದಲ್ಲಿ ಶೇ.77.17 ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ಕ್ಕೆ ಮುಕ್ತಾಯವಾಯಿತು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ದಿ.ಎಸ್‌.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್‌.ಉಗ್ರಪ್ಪ, ಶಾಸಕ ಶ್ರೀರಾಮುಲು ಸಹೋದರಿ ಶಾಂತಾ, ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ನ.6ರಂದು ಮತಗಳ ಎಣಿಕೆ ನಡೆಯಲಿದೆ.

ಮತದಾನ ಆರಂಭದಲ್ಲಿ ನೀರಸವಾಗಿತ್ತು. 9 ಗಂಟೆ ಹೊತ್ತಿಗೆ ಗ್ರಾಮೀಣ ಪ್ರದೇಶಗಳಲ್ಲಿ ಒಂದಷ್ಟು ಬಿರುಸು ಕಂಡಿತ್ತಾದರೂ ನಗರ ಪ್ರದೇಶಗಳಲ್ಲಿ ಮಾತ್ರ ಮತದಾನ ಮಂದಗತಿಯಲ್ಲಿತ್ತು. ಮಹಿಳೆಯರಿಗಾಗಿ ಸ್ಥಾಪಿಸಿದ್ದ ಸಖೀ ಪಿಂಕ್‌ ಮತಗಟ್ಟೆಗಳಲ್ಲೂ ವನಿತೆಯರು ಇರಲಿಲ್ಲ. ಸಂಜೆ ಮುಕ್ತಾಯದ ವೇಳೆಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಎಂದಿನಂತೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ಉತ್ಸಾಹ ತೋರಿದರು.

ಈ ಮಧ್ಯೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆ ಸೇನಾಪಡೆಯ ಯೋಧರನ್ನು ನಿಯೋಜಿಸಲಾಗಿತ್ತು. ಇದೇ ವೇಳೆ, ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹರಿಶ್ಚಂದ್ರನಗರ, ಮಂಡ್ಯ ಜಿಲ್ಲೆ ಭಾರತೀನಗರದ 182ನೇ ಮತಗಟ್ಟೆ, ಕರಡಕೆರೆ ಸೇರಿ ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿ ಆರಂಭವಾದರೆ, ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ ಬಳ್ಳಾರಿ ತಾಲೂಕಿನ ಹರಗಿನಡೋಣಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಮುತೂRರ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುದರಗುಂಡಿ ಸೇರಿ ಕೆಲವೆಡೆ ಮತದಾನ ಬಹಿಷ್ಕರಿಸಿದ ಘಟನೆ ವರದಿಯಾಗಿದೆ.

Advertisement

ಲೋಕಸಭಾ ಕ್ಷೇತ್ರ    
ಶಿವಮೊಗ್ಗ    ಶೇ.61.05
ಮಂಡ್ಯ        ಶೇ.53.93
ಬಳ್ಳಾರಿ        ಶೇ.63.85
ವಿಧಾನಸಭಾ ಕ್ಷೇತ್ರ    
ರಾಮನಗರ        ಶೇ.71.88
ಜಮಖಂಡಿ        ಶೇ.77.17

Advertisement

Udayavani is now on Telegram. Click here to join our channel and stay updated with the latest news.

Next