Advertisement
ಕಲ್ಮಕಾರು ವ್ಯಾಪ್ತಿಗೆ ಒಳಪಟ್ಟ ಕಾಜಿಮಡ್ಕ, ಕೊಪ್ಪಡ್ಕ, ಮೆಂಟೆಕಜೆ, ಅಂಜನಕಜೆ ಮತ್ತು ಗುಳಿಕಾನ ಎನ್ನುವಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ 40 ಕುಟುಂಬಗಳು ವಾಸಿಸುತ್ತಿವೆ. ಕೃಷಿ ಅವಲಂಬಿತರೇ ಹೆಚ್ಚಿರುವ ಈ ಪರಿಸರದ ನಾಗರಿಕರು ನಿತ್ಯ ಜೀವನಕ್ಕೆ ಆವಶ್ಯವಿರುವ ಆಹಾರ ವಸ್ತು ಖರೀದಿಸಲು, ಕೃಷಿ ಫಲ ವಸ್ತುಗಳನ್ನು ಮಾರಾಟ ಮತ್ತು ಖರೀದಿಗೆ ಶೆಟ್ಟಿಕಟ್ಟ-ಗುಳಿಕಾನ ಸಂಪರ್ಕ ರಸ್ತೆಯಲ್ಲಿ ತೆರಳಬೇಕಿದ್ದು, ಈ ಮಧ್ಯೆ ಶೆಟ್ಟಿಕಟ್ಟ ಎನ್ನುವಲ್ಲಿ ಹೊಳೆ ಇರುತ್ತದೆ. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿದು ನೆರೆ ಬಂದು ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದಾಗಿ ನಾಗರಿಕರು, ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯ ವಾಗುತ್ತಿಲ್ಲ. ಈ ಹೊಳೆಗೆ ಸೇತುವೆ ನಿರ್ಮಿಸುವಂತೆ, ಈ ಭಾಗಕ್ಕೆ ಸಂಚಾರ ಬೆಳೆಸುವ ಪಂಚಾಯತ್ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ 35 ವರ್ಷದಿಂದ ಸಂಬಂಧಪಟ್ಟ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದ್ದರು. ಹಲವು ಬಾರಿ ಮನವಿ ಹಾಗೂ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದರು. ಇದುವರೆಗೆ ಸ್ಪಂದಿಸಿಲ್ಲ ಎನ್ನುವ ನೋವು ಸ್ಥಳೀಯರನ್ನು ಕಾಡುತ್ತಿದೆ. ಮತದಾನ ಬಹಿಷ್ಕಾರ ನಡೆ ಸುತ್ತಿರುವ ಗ್ರಾಮಸ್ಥರು ಕಲ್ಮಕಾರು ಬಳಿ ಬ್ಯಾನರ್ ಅಳವಡಿಸುವ ಮೂಲಕ ವ್ಯಕ್ತಪಡಿಸಿದ್ದಾರೆ.
ಕಲ್ಮಕಾರು ಸುಳ್ಯ ತಾಲೂಕು ಕಟ್ಟಕಡೆಯ ಗ್ರಾಮ. ದ.ಕ. ಮತ್ತು ಕೊಡಗು ಗಡಿ ಭಾಗದಲ್ಲಿದೆ. ಪುಷ್ಪಗಿರಿ ತಪ್ಪಲಿನಲ್ಲಿರುವ ಈ ಭಾಗದ ಕೃಷಿಕರು ಅನೇಕ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೂ ಇದು ಸೇರಿದೆ. ಮಳೆಗಾಲದಲ್ಲಿ ಭೂಕುಸಿತದಂತಹ ಘಟನೆಗಳು ನಡೆದು ಗುಳಿಕಾನ ಪರಿಸರದ ಎಂಟು ಕುಟುಂಬಗಳು ಮನೆ, ಕೃಷಿ ಭೂಮಿ ತೊರೆದು ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದವು. ಅವರಿಗಿನ್ನೂ ಸರಕಾರದ ಪರಿಹಾರ ದೊರಕಿಲ್ಲ. ವಿದ್ಯುತ್, ಮೊಬೈಲ್, ಕುಡಿಯುವ ನೀರು ಸಹಿತ ಅನೇಕ ತರಹದ ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಈ ಭಾಗದಲ್ಲಿ ಈ ಹಿಂದೆ ನಕ್ಸಲರ ಚಲನವಲನವೂ ಕಂಡುಬಂದಿತ್ತು.