ಪ್ರಜಾತಂತ್ರದ ಉತ್ಸವ ಎಂದೇ ಅರಿಯಲ್ಪಡುವ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ನಡೆಯಲಿದೆ. ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಯ ಮೊದಲ ಹಂತದ ಮತದಾನ ಎ.11ರಂದು ನಡೆದಿದೆ. ಗುರುವಾರ 12 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆ. ಏಳು ಹಂತಗಳಲ್ಲಿ ಕರ್ನಾಟಕದ ಪಾಲಿಗೆ ಇದು ಮೊದಲ ಹಂತದ ಚುನಾವಣೆ. ರಾಜ್ಯದ 14 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಬೇಕು. ಭಾರತಕ್ಕೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹಿರಿಮೆ ಇದೆ. ಹೀಗಾಗಿ ಇಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಜಗತ್ತಿನ ಗಮನ ಸೆಳೆಯುತ್ತದೆ. 29 ರಾಜ್ಯಗಳು, 9 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿರುವ ಬೃಹತ್ ದೇಶದ ಚುನಾವಣೆ ನಡೆಸುವುದು ಭಾರೀ ಸವಾಲಿನ ಕೆಲಸವಾದರೂ ಚುನಾವಣಾ ಆಯೋಗ ಈ ಕೆಲಸವನ್ನು ಸಾಧ್ಯವಾದಷ್ಟು ಸಮರ್ಥವಾಗಿ ನಿಭಾಯಿಸುತ್ತಿದೆ ಎನ್ನುವುದು ನಮ್ಮ ಹೆಗ್ಗಳಿಕೆ. ಇಷ್ಟರ ತನಕ ನಡೆದಿರುವ ಚುನಾವಣೆಗಳು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಮ್ಮ ಸಂವಿಧಾನ ಕರ್ತರು ಇಟ್ಟ ನಂಬಿಕೆಯನ್ನು ಎತ್ತಿ ಹಿಡಿದಿವೆ. ಚುನಾವಣೆಯಿಂದ ಚುನಾವಣೆಗೆ ನಾವು ಪ್ರಬುದ್ಧರಾಗುತ್ತಿದ್ದೇವೆ.
18 ವರ್ಷ ಮೇಲ್ಪಟ್ಟಿರುವ ನಾಗರಿಕರಿಗೆ ಸಂವಿಧಾನದತ್ತವಾಗಿ ಮತದಾನದ ಹಕ್ಕು ಪ್ರಾಪ್ತವಾಗಿದೆ. ಅದು ಹಕ್ಕು ಮಾತ್ರವಲ್ಲದೆ ಜವಾಬ್ದಾರಿ ಮತ್ತು ಕರ್ತವ್ಯ. ನಮ್ಮದು ಚಲನಶೀಲ ಪ್ರಜಾಪ್ರಭುತ್ವವಾಗಿದ್ದರೂ ಎಲ್ಲರೂ ಮತಹಾಕುವಂತೆ ಮಾಡುವಲ್ಲಿ ಮಾತ್ರ ವಿಫಲರಾಗಿದ್ದೇವೆ. ಇದರ ಹೊರತಾಗಿಯೂ, ಚುನಾವಣಾ ಆಯೋಗ, ಸರ್ಕಾರ, ವಿವಿಧ ಸರ್ಕಾರೇತರ ಸಂಘಟನೆಗಳು ಮಾಡಿದ ಸತತ ಪ್ರಯತ್ನದ ಫಲವಾಗಿ ಈಗ ಜನರಲ್ಲಿ ಮತದಾನದ ಜಾಗೃತಿ ಉಂಟಾಗಿರುವುದು ಸಕಾರಾತ್ಮಕ ಬೆಳವಣಿಗೆ. ಚುನಾವಣೆ ಆಯೋಗದ ಸ್ವೀಪ್‌ನಂಥ ಕಾರ್ಯಕ್ರಮಗಳು ಹಾಗೂ ಮತದಾನಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಕೈಗೊಂಡಿರುವ ವಿವಿಧ ಕ್ರಮಗಳಿಂದಾಗಿ ಕಳೆದ ಕೆಲವು ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚುತ್ತಿರುವುದು ಕಂಡು ಬಂದಿದೆ. ನಿರ್ದಿಷ್ಟವಾಗಿ ವಿದ್ಯಾವಂತ ಮತದಾರರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಲು ಮಾಡಿರುವ ಪ್ರಯತ್ನಗಳು ಶ್ಲಾಘನೀಯ.
ನಗರವಾಸಿಗಳು ಮತದಾರರು ಮತ ಹಾಕುವುದಿಲ್ಲ ಎನ್ನುವುದು ಸಾಮಾನ್ಯವಾದ ದೂರು. ಮತದಾನದ ದಿನದ ರಜೆಯನ್ನು ವಿಶ್ರಾಂತಿಯ ದಿನವೆಂದು, ಶಾಪಿಂಗ್ ಅಥವಾ ಪಿಕ್‌ನಿಕ್ ದಿನವೆಂದು ಪರಿಗಣಿಸುವ ಜಾಯಮಾನ ನಗರ ಪ್ರದೇಶಗಳಲ್ಲಿ ವಾಸವಾಗಿರುವವರಲ್ಲಿ ಇದೆ. ಅದೇ ರೀತಿ ನನ್ನ ಒಂದು ಮತದಿಂದ ಏನಾಗುತ್ತದೆ ಎಂದು ಭಾವಿಸಿ ಮತದಾನವನ್ನು ತಪ್ಪಿಸುವವರೂ ಇದ್ದಾರೆ. ಭಾರತದಂಥ 90 ಕೋಟಿ ಮತದಾರರಿರುವ ದೇಶದಲ್ಲಿ ಕನಿಷ್ಠ ಕೆಲವು ಕೋಟಿ ಮತದಾರರು ಈ ಮನೋಧರ್ಮ ಹೊಂದಿದರೆ ಅದು ಬೀರುವ ಪರಿಣಾಮ ಬಹಳ ದೊಡ್ಡದು. ಪ್ರಜಾತಂತ್ರದಲ್ಲಿ ಪ್ರತಿಯೊಬ್ಬರ ಮತಕ್ಕೂ ಬಹಳ ಮೌಲ್ಯವಿದೆ. ನಮ್ಮ ಭವಿಷ್ಯವನ್ನು ನಿರ್ಧರಿಸುವುದು ಈ ಮತ.
ಈಗಿನ ರಾಜಕೀಯ ಹೊಲಸಾಗಿದೆ ಎನ್ನುವುದು ನಿಜ. ಸ್ಪರ್ಧಿಸುವ ಅಭ್ಯರ್ಥಿಗಳೆಲ್ಲ ಶೇ. 100 ಯೋಗ್ಯರೂ ಸಮರ್ಥರೂ ಅಲ್ಲ ಎನ್ನುವುದೂ ನಿಜವೇ. ಆದರೆ ಇವರಲ್ಲೇ ಉತ್ತಮರನ್ನು ಆರಿಸುವ ಅನಿವಾರ್ಯತೆ ನಮ್ಮ ಮುಂದಿದೆ. ಅಭ್ಯರ್ಥಿಗಳು ಸರಿ ಇಲ್ಲ ಎಂದು ನಾವು ಮತದಾನ ಮಾಡದೇ ಹೋದರೆ ಅಯೋಗ್ಯರೇ ಆರಿಸಿ ಬರುವ ಅಪಾಯ ಇದೆ. ವಿಧಾನಸಭೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೂ ಲೋಕಸಭಾ ಚುನಾವಣೆಗೂ ಮೂಲಭೂತವಾಗಿ ಕೆಲವು ವ್ಯತ್ಯಾಸಗಳಿವೆ. ಲೋಕಸಭಾ ಚುನಾವಣೆ ಒಟ್ಟಾರೆ ದೇಶದ ಭವಿಷ್ಯ ಮತ್ತು ಹಿತದೃಷ್ಟಿಯನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಕೆಲವು ವಿಚಾರಗಳೂ ಗೌಣವಾಗುವುದೂ ಇದೆ. ಮುಂದಿನ ಐದು ವರ್ಷದಲ್ಲಿ ದೇಶ ಯಾವ ದಿಶೆಯಲ್ಲಿ ಸಾಗಬೇಕು ಎಂದು ನಿರ್ಧರಿಸುವ ಪ್ರಮುಖ ಅಸ್ತ್ರ ನಮ್ಮ ಮತ. ನಾವು ಮತ ಹಾಕದಿದ್ದರೆ ಮತ ಹಾಕಿದ ಬೇರೆಯವರು ನಮ್ಮ ಭವಿಷ್ಯವನ್ನು ನಿರ್ಧರಿಸಿದಂತಾಗುತ್ತದೆ.
ದೇಶದಲ್ಲಿ ಏನಾದರೂ ಧನಾತ್ಮಕವಾದ ಬದಲಾವಣೆಯನ್ನು ಕಾಣಬೇಕಾದರೆ ಸದೃಢ, ಸುಸ್ಥಿರ ಸರಕಾರ ಇರುವುದು ಅಗತ್ಯ.ಚುನಾವಣೆ ನಮಗೆ ಈ ಸರಕಾರವನ್ನು ಆರಿಸುವ ಅವಕಾಶವನ್ನು ಕೊಡುತ್ತದೆ. ದೇಶದಲ್ಲಿ ಅದು ಸರಿ ಇಲ್ಲ ಇದು ಸರಿ ಇಲ್ಲ ಎಂದು ಲೋಪದೋಷಗಳ ಕುರಿತು ಸದಾ ಗೊಣಗುತ್ತಿರುತ್ತೇವೆ. ಆದರೆ ಈ ಲೋಪಗಳಿಗೆಲ್ಲ ಪರೋಕ್ಷವಾಗಿ ನಾವೇ ಕಾರಣ ಎನ್ನುವುದನ್ನು ತಿಳಿದುಕೊಂಡಿರಬೇಕು. ನಾವು ಚುನಾವಣೆ ಸಂದರ್ಭದಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನನ್ನ ಒಂದು ಮತದಿಂದ ಏನಾಗುತ್ತದೆ ಎಂದು ಭಾವಿಸಿ ಮತದಾನ ಮಾಡದಿದ್ದವರಿಗೆ ಅನಂತರ ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಹೀಗಾಗಿ ಯಾವುದೇ ನೆಪಗಳನ್ನು ಹೇಳದೆ ಮತದಾನ ಮಾಡುವ.