Advertisement

ಮತದಾನ ಜನರಿಗೆ ಸಿಕ್ಕಿರುವ ಪ್ರಬಲ ಅಸ್ತ್ರ

02:43 PM Jan 26, 2018 | |

ಬೀದರ: ಮತದಾನವು ಸಂವಿಧಾನಬದ್ಧವಾಗಿ ಜನರಿಗೆ ಸಿಕ್ಕಿರುವ ಪ್ರಬಲ ಅಸ್ತ್ರ. ಮತದಾನಕ್ಕೆ ಅರ್ಹರಿರುವ ಎಲ್ಲರೂ ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಸ್‌. ಪಾಟೀಲ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ಜಗತ್ತಿನಲ್ಲಿರುವ ದೊಡ್ಡ ಪ್ರಜಾಪ್ರಭುತ್ವ ರಾಷ್ಟಗಳಲ್ಲಿ ಒಂದಾಗಿರುವ ಭಾರತದಲ್ಲಿ ಮತದಾನಕ್ಕೆ ಮಹತ್ವದ ಸ್ಥಾನವಿದೆ. ಚುನಾವಣೆಯಲ್ಲಿ ಪ್ರತಿಯೊಂದು ಮತ ನಿರ್ಣಾಯಕವಾಗಿರುತ್ತದೆ. ಮತದಾನದಲ್ಲಿ ಪಾಲ್ಗೊಳ್ಳದೇ ಇರುವುದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕೆಲವೆಡೆ ಇಡೀ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದು ಕಂಡುಬರುತ್ತಿದೆ. ಮತದಾನ ಬಹಿಷ್ಕಾರ ಕಾನೂನು ಬಾಹೀರವಾದದ್ದು. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರವಿರಬಾರದು. 18 ವರ್ಷ
ಪೂರ್ಣಗೊಂಡ ಯುವಕ- ಯುವತಿಯರು ಕೂಡಲೇ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿ ಮತದಾನ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಮಾತನಾಡಿ, ಮತದಾನವು ನಾಗರಿಕರ ಪವಿತ್ರ ಕರ್ತವ್ಯ. ಚುನಾವಣೆ ಸಂದರ್ಭದಲ್ಲಿ ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಯೋಗ್ಯ ವ್ಯಕ್ತಿಯನ್ನು ಆರಿಸಬೇಕು.

Advertisement

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮನೆಯ ಸದಸ್ಯರು, ಸುತ್ತಲಿನವರು ಮತ್ತು ಸ್ನೇಹಿತರಿಗೆ ಚುನಾವಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ| ಡಿ.ಷಣ್ಮುಖ ಅವರು ಪ್ರಾಸ್ತಾವಿಕ ಮಾತನಾಡಿ, ಮತದಾನದ ಮಹತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಜಿಲ್ಲಾಡಳಿತದಿಂದ ಪ್ರತಿ ಶಾಲೆ- ಕಾಲೇಜುಗಳಲ್ಲಿ ಸ್ವೀಪ್‌ ಕಾರ್ಯಕ್ರಮ ಯೋಜಿಸಲಾಗುತ್ತಿದೆ. ಅಲೆಮಾರಿ ಜನಾಂಗದವರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ಮತದಾರರ ಗುರುತಿನ ಚೀಟಿಯಲ್ಲಿರುವ ದೋಷಗಳ ನಿವಾರಣೆಗೆ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಈಪಂ ಸಿಇಒ ಡಾ| ಆರ್‌.ಸೆಲ್ವಮಣಿ, ಎಸ್‌ಪಿ ಡಿ.ದೇವರಾಜ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ| ಎನ್‌. ನಾಗರಾಜ, ತಹಶೀಲ್ದಾರಾದ ಕೀರ್ತಿ ಚಾಲಕ, ಶಾಂತಲಾ ಚಂದನ್‌, ಡಿಡಿಪಿಯು ಶಿವರಾಜ, ಪಾಟೀಲ, ಡಿಡಿಪಿಐ ಇನಾಯತ್‌ ಅಲಿ ಶಿಂಧೆ, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next